ರಾಜ್ಯ

ಐಎಂಎ ಮನ್ಸೂರ್ ಖಾನ್ ಬಂಧ;: ಶಾಸಕ ರೋಷನ್ ಬೇಗ್, ಸಚಿವ ಜಮೀರ್ ಖಾನ್ ಮೇಲೆ ತನಿಖಾ ತೂಗುಗತ್ತಿ

Srinivasamurthy VN
ಬೆಂಗಳೂರು: ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ ಬಂಧನದ ಬೆನ್ನಲ್ಲೇ ಶಿವಾಜಿ ನಗರದ ಶಾಸಕ ರೋಷನ್ ಬೇಗ್ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೂ ತನಿಖೆ ಬಿಸಿ ತಟ್ಟುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈಗೆ ಪರಾರಿಯಾಗಿದ್ದ ಆಡಿಯೋ ಟೇಪ್ ಬಿಡುಗಡೆ ಮಾಡಿದ್ದ ಮನ್ಸೂರ್ ಖಾನ್, ತಾನು ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರಿಗೆ 400 ಕೋಟಿ ರೂ.ಗಳನ್ನು ನೀಡಿದ್ದೆ. ಆದರೆ ಅದನ್ನು ವಾಪಸ್ ಕೇಳಿದಾಗ ಅವರ ಬೆಂಬಲಿಗರು ಬೆದರಿಕೆ ಹಾಕಿದ್ದರು ಎಂದು ಹೇಳಿದ್ದರು. ಇದೇ ಕಾರಣಕ್ಕೆ ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಎಸ್ ಐಟಿ ಅಧಿಕಾರಿಗಳು ರೋಷನ್ ಬೇಗ್ ರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಇದೀಗ ಮನ್ಸೂರ್ ಖಾನ್ ಬಂಧನವಾಗಿದ್ದು, ಅಧಿಕಾರಿಗಳು ಮತ್ತೆ ರೋಷನ್ ಬೇಗ್ ರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಶಾಸಕ ಮತ್ತು ಹಾಲಿ ಸಚಿವ ಜಮೀರ್ ಅಹ್ಮದ್ ಖಾನ್ ರನ್ನೂ ಕೂಡ ಅಧಿಕಾರಿಗಳು ತನಿಖೆಗೊಳಪಡಿಸುವ ಸಾಧ್ಯತೆ ಇದ್ದು, ಈ ಹಿಂದೆ ಮನ್ಸೂರ್ ಖಾನ್ ಅವರಿಗೆ ಆಸ್ತಿ ಮಾರಾಟ ಮಾಡಿದ ಕುರಿತು ಜಮೀರ್ ರನ್ನು ಅಧಿಕಾರಿಗಳು ತನಿಖೆ ನಡೆಸಿದ್ದರು. ಅಂದು ಸುದ್ದಿಗೋಷ್ಠಿ ನಡೆಸಿದ್ದ ಜಮೀರ್ ಅವರು, ತಾವು ತನ್ನ ಆಸ್ತಿಯನ್ನು ಕಾನೂನು ಬದ್ಧವಾಗಿಯೇ ಮನ್ಸೂರ್ ಖಾನ್ ಅವರಿಗೆ ಮಾರಾಟ ಮಾಡಿದ್ದೇನೆ. ಇದರಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಯಲ್ಲಿ ತಾನು ಭಾಗಿಯಾಗಿಲ್ಲ ಎಂದು ಹೇಳಿ, ದಾಖಲೆಗಳನ್ನೂ ಕೂಡ ನೀಡಿದ್ದರು. ಅಲ್ಲದೆ ತನಿಖೆ ಸಂಬಂಧ ಅಧಿಕಾರಿಗಳು ಯಾವುದೇ ಸಂದರ್ಭದಲ್ಲೂ ವಿಚಾರಣೆಗೆ ಹಾಜರಾಗಲು ತಾನು ಸಿದ್ಧ ಎಂದು ಹೇಳಿದ್ದರು.
ಒಟ್ಟಾರೆ ಐಎಂಎ ಪ್ರಕರಣದ ಕಿಂಗ್ ಪಿನ್ ಬಂಧನದೊಂದಿಗೆ ಹೂಡಿಕೆದಾರರಿಗೆ ತಮ್ಮ ಹಣ ವಾಪಸ್ ಸಿಗುವ ಮಹದಾಸೆ ಚಿಗುರೊಡೆದಿದ್ದು, ಪ್ರಕರಣದಲ್ಲಿ ಭಾಗಿಯಾದವರ ಎದೆಯಲ್ಲಿ ಬಂಧನ ಭೀತಿ ಶುರುವಾಗಿದೆ.
SCROLL FOR NEXT