ರಾಜ್ಯ

ಐಎಂಎ ವಂಚನೆ ಪ್ರಕರಣ: ಪ್ರಭಾವಿ ವ್ಯಕ್ತಿಗಳೂ ಪಾಲುದಾರರೆಂದ ಮನ್ಸೂರ್ ಖಾನ್?

Raghavendra Adiga
ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಐಎಂಎ ಸಮೂಹ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಮನ್ಸೂರ್‌ ಖಾನ್‌ ನನ್ನು ತೀವ್ರ ವಿಚಾರಣೆಗೊಳಪಡಿಸಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ.
ಕಂಪನಿ ಆರಂಭ, ಅದು ಬೆಳೆದು ಬಂದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿರುವ ಅಧಿಕಾರಿಗಳು, ಎಲ್ಲವನ್ನೂ ದಾಖಲಿಸಿಕೊಂಡಿದ್ದಾರೆ. ಸುಮಾರು 1 ಸಾವಿರ ಕೋಟಿಗೂ ಹೆಚ್ಚಿನ ಹಣಕಾಸಿನ ರಹಸ್ಯ ವ್ಯವಹಾರವನ್ನು ಖಾನ್ ವಿಚಾರಣೆಯ ವೇಳೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಶಾಂತಿನಗರದಲ್ಲಿನ ಇಡಿ ಕಛೇರಿಯಲ್ಲಿ ಜಂಟಿ ನಿರ್ದೇಶಕ ರಮಣ್ ಗುಪ್ತ, ಎಸಿಪಿ ತ್ಯಾಗರಾಜ್ ನೇತೃತ್ವದ ತಂಡ ಮನ್ಸೂರ್ ಖಾನ್ ವಿಚಾರಣೆ ನಡೆಸಿದೆ.ಈ ವೇಳೆ ಕೆಲ ಪ್ರಭಾವಿ ವ್ಯಕ್ತಿಗಳು ಕಂಪನಿಯ ಪಾಲುದಾರರಾಗಿದ್ದಾರೆಂದು ಮನ್ಸೂರ್ ಪ್ರಸ್ತಾಪಿಸಿದ್ದಾನೆ ಎಂದು ಹೇಳಲಾಗಿದೆ.
ಮನ್ಸೂರ್ ಖಾನ್ ಹೇಳಿಕೆಗಳನ್ನು ವೀಡಿಯೋ ದಾಖಲಾತಿ ಮಾಡಲಾಗಿದೆ ಅಲ್ಲದೆ ಕೆಲವು ದಾಖಲೆಗಳಿಗೆ ಆತನಿಂದ ಸಹಿಯನ್ನು ಪಡೆದುಕೊಂಡಿರುವುದಾಗಿಯೂ ತಿಳಿದುಬಂದಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇನ್ನೆರಡು ದಿನ ಆತನನ್ನು ವಿಚಾರಣೆಗೆ ಒಳಪಡಿಸಿ ಇನ್ನಷ್ಟು ಮಾಹಿತಿ ಸಂಗ್ರಹಿಸುವ ಸಾಧ್ಯತೆ ಇದೆ. ಬುಧವಾರ ಮನ್ಸೂರ್ ಖಾನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿದೆ. ಆದರೆ ಆತನ ವ್ಯವಹಾರಗಳ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಬೇಕಿರುವುದರಿಂದ ಖಾನ್‌ನನ್ನು ಇನ್ನೂ ಕೆಲವು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಲು ಇಡಿ ಅಧಿಕಾರಿಗಳು ಉದ್ದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
SCROLL FOR NEXT