ರಾಜ್ಯ

ಕೊಪ್ಪಳ: ವೈದ್ಯರು ಮೃತಳೆಂದು ಘೋಷಿಸಿದ ಮಹಿಳೆ ಅಂತ್ಯ ಸಂಸ್ಕಾರಕ್ಕೆ ಹೊರಟಾಗ ಕಣ್ಣು ಬಿಟ್ಟಳು!

Raghavendra Adiga
ಕೊಪ್ಪಳ: ವೈದ್ಯರು ಮೃತಪಟ್ಟಿದ್ದಾಳೆಂದು ಘೋಷಿಸಿದ ಮಹಿಳೆ ಶವ ಸಂಸ್ಕಾರಕ್ಕೆಂದು ಹೊರಟಾಗ ಕಣ್ಣು ಬಿಟ್ಟಿರುವ ವಿಚಿತ್ರ ಘಟನೆ ಕೊಪ್ಪಳದಲ್ಲಿ ನಡೆದಿದೆ. ವಿಷಯವೇನೆಂದರೆ ನಗರದ ಖಾಸಗಿ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಬದುಕಿದ್ದ ಮಹಿಳೆಯನ್ನು ಆಕೆಯ ಸಂಬಂಧಿಕರು ಅಂತ್ಯ ಸಂಸ್ಕಾರ ಮಾಡಲು ಮುಂದಾಗಿದ್ದರು.
ಮೃತಪಟ್ಟಿದ್ದಳೆನ್ನಲಾದ ಮಹಿಳೆ ಶವ ಸಂಸ್ಕಾರಕ್ಕೆಂದು ಎತ್ತಲು ಮುಂದಾದಾಗ ಕಣ್ಣು ತೆರೆದಿದ್ದಾಳೆ. ಇದರಿಂದ ದಿಗ್ಮೂಢರಾದ ಆಕೆಯ ಸಂಬಂಧಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ವಿವರ
ಮಂಜುನಾಥ ಕುಂಬಾರ ಎಂಬುವರ ಪತ್ನಿ ಕವಿತಾ ಮಂಜುನಾಥ ಕುಂಬಾರ್ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಸಲುವಾಗಿ ಕೊಪ್ಪಳದ ಗೋವನಕೊಪ್ಪ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ ವೇಳೆ ಎರಡು ದಿನಗಳ ಕಾಲ ಚಿಕಿತ್ಸೆ ನೀಡಿದ ವೈದ್ಯರು ಸೋಮವಾರ ರಾತ್ರಿ ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ. 
ವೈದ್ಯರ ಮಾತುಗಳನ್ನು ನಂಬಿದ ಕವಿತಾ ಕುಟುಂಬ ಆಕೆಯ ಅಂತ್ಯಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಂಡಿದೆ.ಮಂಗಳವಾರ ಬೆಳಿಗ್ಗೆ ಆಕೆಯ ಸಂಬಂಧಿಗಳು ಶವಸಂಸ್ಕಾರಕ್ಕೆಂದು ಆಕೆಯನ್ನು ಎತ್ತಲು ಮುಂದಾದಾಗ ಕವಿತಾ ಕಣ್ಣು ತೆರೆದಿದ್ದಾರೆ.ಇದನ್ನು ಕಂಡ ಕವಿತಾ ಪತಿ, ಸಂಬಂಧಿಗಳು ಆಸ್ಪತ್ರೆ ಎದುರು ನೆರೆದು ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
"ಕವಿತಾಗೆ ಇದಾಗಲೇ ಆರು ಮಕ್ಕಳಿದ್ದು ಆಕೆ ಸಂತಾನ ಹರಣ ಚಿಕಿತ್ಸೆಗೆ ಆಗಮಿಸಿದ್ದಳು. ಆಕೆಯ ಚಿಕಿತ್ಸೆಗಾಗಿ ಇದುವರೆಗೆ ಒಂದು ಲಕ್ಷದಷ್ಟು ಹಣ ಪಡೆದಿರುವ ವೈದ್ಯರು ಆಕೆ ಸಾವನ್ನಪ್ಪಿದ್ದಾಳೆಂದು ಘೋಷಿಸಿದ್ದರು. ಇವರ ಮಾತನ್ನು ನಂಬಿ ನಾವು ಅಂತ್ಯ ಸಂಸ್ಕಾರ ತಯಾರಿ ನಡೆಸಿದ್ದೆವು" ಕವಿತಾ ಪೋಷಕರು ವಿವರಿಸಿದ್ದಾರೆ.
ಇದೀಗ ಸ್ಥಳಕ್ಕೆ ಪೋಲೀಸರು ಆಗಮಿಸಿದ್ದು ಆಸ್ಪತ್ರೆ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
SCROLL FOR NEXT