ರಾಜ್ಯ

ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ: ಪ್ರಜ್ವಲ್ ರೇವಣ್ಣ ಖುದ್ದು ಹಾಜರಿಗೆ ಹೈಕೋರ್ಟ್ ನೋಟಿಸ್

Lingaraj Badiger
ಬೆಂಗಳೂರು: ಆದಾಯ ತೆರಿಗೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ ಆರೋಪಕ್ಕೆ ಸಂಬಂಧ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಹೈಕೋರ್ಟ್ ಶುಕ್ರವಾರ ನೋಟಿಸ್  ಜಾರಿ ಮಾಡಿದೆ. 
ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ ಹಾಸನ ಸಂಸದ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಬಿಜೆಪಿ ಅಭ್ಯರ್ಥಿ ಎ.ಮಂಜು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ಪೀಠ, ಪ್ರಕರಣ ಸಂಬಂಧ ಆಗಸ್ಟ್ 18ರಂದು ಖುದ್ದು ಹಾಜರಾಗಿ ಇಲ್ಲವೇ ವಕೀಲರ ಮೂಲಕ ವಿವರ ನೀಡುವಂತೆ ಪ್ರಜ್ವಲ್ ಅವರಿಗೆ ಸೂಚಿಸಿದೆ. 
ಜೊತೆಗೆ, ಪ್ರತಿವಾದಿಗಳಾದ ಕೆ.ಎಚ್.ವಿನೋದ್ ರಾಜ್‌, ಎಚ್‌.ಎಂ.ಚಂದ್ರೇಗೌಡ, ಎಂ.ಲೋಕೇಶ್‌  ಮತ್ತು ಆರ್‌.ಜಿ.ಸತೀಶ್‌ ಅವರಿಗೆ ನೋಟಿಸ್‌ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತುಮಕೂರಿನಿಂದ ಚುನಾವಣಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ಪ್ರಜ್ವಲ್ ರೇವಣ್ಣ ಅವರಿಗೆ 26 ಲಕ್ಷ ರೂ. ಸಾಲ ನೀಡಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಪ್ರಜ್ವಲ್ ರೇವಣ್ಣ ಅವರು ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಈ ಮೊತ್ತವನ್ನು ಉಲ್ಲೇಖಿಸಿಲ್ಲ ಹಾಗೂ ಇತರ ಆಸ್ತಿಗಳ ಕುರಿತು ಕೂಡ ನಮೂದಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
SCROLL FOR NEXT