ಆರೋಪಿಯು ಗುಂಡು ಹಾರಿಸಿದ ರೈಫಲ್
ಕಾರವಾರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಾಜಿ ಸೈನಿಕನೊಬ್ಬ ತನ್ನ ಸೋದರನ ಪತ್ನಿ ಹಾಗೂ ಆಕೆಯ ಮಗನ ಮೇಲೆ ಗುಂಡು ಹಾರಿಸಿದ್ದು ಘಟನೆಯಲ್ಲಿ ಒಂಬತ್ತು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಮತಕೇರಿಯಲ್ಲಿ ನಡೆದಿದೆ.
ಘಟನೆ ವೇಳೆ ಮಹಿಳೆಯ ಪತಿ ಅಮಿತ್ ಪ್ರಭು ಸ್ಥಳದಲ್ಲಿರಲಿಲ್ಲ ಎಂದು ಪೋಲೀಸರು ಹೇಳಿದ್ದಾರೆ. ಆರೋಪಿ ಅಜಯ್ ಪ್ರಭು (44), ಮಾಜಿ ಸೈನಿಕನಾಗಿದ್ದರೆ ಬಾಲಕ ಅನುಜ್ ಅಮಿತ್ ಪ್ರಭು (9) ಸಾವನ್ನಪ್ಪಿದ್ದು ಆತನ ತಾಯಿ ಮೇಧಾ ಅಮಿತ್ ಪ್ರಭು (40) ತೀವ್ರ ಗಾಯಗೊಂಡಿದ್ದಾರೆ. ಅವರಿಗೆ ಅಂಕೋಲಾ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮಣಿಪಾಲ್ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆ ಒದಗಿಸಲಾಗುತ್ತಿದೆ.
ಆರೋಪಿ ಅಜಯ್ ತನ್ನ ಸೋದರ ಅಮಿತ್ ಅವರ ನಡುವೆ ಆಸ್ತಿ ವಿಚಾರವಾಗಿ ವಿವಾದವಿತ್ತು. ಶನಿವಾರ ಸಂಜೆ, ಆರೋಪಿ ತನ್ನ ಸೋದರನ ಮನೆಗೆ ಆಗಮಿಸಿ ಮೇಧಾ ಅವರೊಂದಿಗೆ ಈ ಕುರಿತು ಜಗಳ ತೆಗೆದಿದ್ದಾನೆ. ಅಲ್ಲದೆ ಒಂದು ಕ್ಷಣದಲ್ಲೇ ಕೋಪಗೊಂಡ ಆರೋಪಿ ನ್ನ ರೈಫಲ್ ತೆಗೆದುಕೊಂಡು ಬಾಲಕ ಅನುಜ್ ಹಾಗೂ ಮೇಧಾ ಅವರ ತಲೆಗೆ ಗುಂಡು ಹಾರಿಸಿದ್ದಾನೆ. ಆ ವೇಳೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದರೆ ಮೇಧಾ ತಲೆಗೆ ಗಂಭೀರ ಗಾಯವಾಗಿದೆ.
ಘಟನೆ ನಡೆದ ತಕ್ಷಣವೇ ನೆರೆಹೊರೆಯವರು ಅಂಕೋಲಾ ಪೊಲೀಸರಿಗೆ ಮಾಹಿತಿ ನೀಡಿದ್ದು ಪೋಲೀಸರು ಸ್ಥಳಕ್ಕೆ ಧಾವಿಸಿ ತಾಯಿ ಮತ್ತು ಮಗ ಇಬ್ಬರನ್ನೂ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದರು, ಅಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಪೊಲೀಸರು ಅಜಯ್ ಪ್ರಭು ಅವರನ್ನು ಬಂಧಿಸಿ ಆತನ ರೈಫಲ್ ವಶಪಡಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ, ಆರೋಪಿ ಮದ್ಯವ್ಯಸನಿಯಾಗಿದ್ದು ಮಾದಕ ವಸ್ತು ಸೇವನೆ ಮಾಡುತ್ತಿದ್ದ. ಆತ ತನ್ನ ಪತ್ನಿ, ಮಕ್ಕಳೊಡನೆ ಮನೆಯ ಮೊದಲ ಮಹಡಿಯಲ್ಲಿ ವಾಸವಿದ್ದ. ಅಮಿತ್ ಅಂಕೋಲಾ ಪಟ್ಟಣದಲ್ಲಿ ಐಸ್ ಕ್ರೀಂ ಪಾರ್ಲರ್ ನಡೆಸುತ್ತಿದ್ದ.
ಘಟನೆಗೆ ಇನ್ನಷ್ಟೇ ನಿಖರ ಕಾರಣ ಪತ್ತೆಯಾಗಬೇಕಿದೆ.ಪೊಲೀಸರು ರೈಫಲ್ ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸಲು ಭಾನುವಾರ ಬೆಳಿಗ್ಗೆ ಬ್ಯಾಲಿಸ್ಟಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ವಿವರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos