ರಾಜ್ಯ

ಕೊಡಗು ಜಿಲ್ಲೆ ಮೂಲಸೌಕರ್ಯ ಪುನರ್ ನಿರ್ಮಾಣಕ್ಕೆ 535 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿ ಸೂಚನೆ

Srinivas Rao BV
ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ 2018ರ ಮುಂಗಾರಿನಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಅನಾಹುತದ ಹಿನ್ನೆಲೆಯಲ್ಲಿ ರಸ್ತೆ ಮತ್ತಿತರ ಮೂಲಸೌಕರ್ಯ ಪುನರ್ ನಿರ್ಮಾಣಕ್ಕೆ ಸುಮಾರು 535 ಕೋಟಿ ರೂ. ಅಗತ್ಯವಿದ್ದು, ಕೂಡಲೇ ಕ್ರಿಯಾ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊಡಗು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಗೃಹಕಚೇರಿ ಕೃಷ್ಣಾದಲ್ಲಿ ಕೊಡಗು ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.
ಅತಿವೃಷ್ಟಿ, ಭೂ ಕುಸಿತದಿಂದ ರಸ್ತೆ, ಕಟ್ಟಡ ಸೇರಿದಂತೆ ಸುಮಾರು 1400 ಕೋಟಿ ರೂ. ಮೌಲ್ಯದ ಮೂಲಸೌಲಭ್ಯ ವ್ಯವಸ್ಥೆಗಳು ನಾಶವಾಗಿವೆ. ಈ ವರೆಗೆ ಭಾರತ ಸರ್ಕಾರದಿಂದ 58 ಕೋಟಿ ಹಾಗೂ ರಾಜ್ಯ ಸರ್ಕಾರದ ವಿಶೇಷ ಅನುದಾನ 85 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು, ನಗರ ಪ್ರದೇಶದಲ್ಲಿ ಚರಂಡಿ ಮತ್ತಿತರ ವ್ಯವಸ್ಥೆಗಳ ಶಾಶ್ವತ ದುರಸ್ತಿಗೆ ಸುಮಾರು 535 ಕೋಟಿ ರೂ. ಗಳ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಈ ಸೌಕರ್ಯಗಳ ಪುನರ್ ನಿರ್ಮಾಣಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.
ಕೊಡಗಿನಲ್ಲಿ ಸಂಪೂರ್ಣವಾಗಿ ಮನೆ ಕಳೆದುಕೊಂಡಿರುವ 842 ಜನರಿಗೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮದೆ, ಕರ್ಣಂಗೇರಿ ಹಾಗೂ ಮಾದಾಪುರದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕಾಗಿ 111 ಕೋಟಿ ರೂ. ಒದಗಿಸಲಾಗಿದೆ. ಮೂಲಸೌಕರ್ಯಕ್ಕಾಗಿ 42.92 ಕೋಟಿ ರೂ. ಒದಗಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಎಲ್ಲ ಮನೆಗಳೂ ಸಿದ್ಧವಾಗಲಿವೆ. ಇನ್‍ಫೋಸಿಸ್ ಪ್ರತಿಷ್ಠಾನದಿಂದ 200 ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು ತಿಳಿಸಿದರು. ಸಂಪಾಜೆ ಗ್ರಾಮದಲ್ಲಿ ಸೇವಾಭಾರತಿ ಸಂಸ್ಥೆಯವರು 35 ಮನೆಗಳನ್ನು ನಿರ್ಮಿಸಲು ಮುಂದೆ ಬಂದಿದ್ದು, ಅನುಮೋದನೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.  
ಇದಲ್ಲದೆ ತಮ್ಮ ಜಮೀನಿನಲ್ಲಿಯೇ ಮನೆ ಕಟ್ಟಿಕೊಳ್ಳಲು ನೆರವು ನೀಡುವಂತೆ 83 ಮಂದಿ ಮನೆ ಕಳೆದುಕೊಂಡವರು ಅರ್ಜಿ ಸಲ್ಲಿಸಿದ್ದು, 54 ಜನರಿಗೆ ತಲಾ 9 ಲಕ್ಷ ರೂ. ಮಂಜೂರು ಮಾಡಲಾಗಿದೆ. ಉಳಿದ 29 ಜನರಿಗೂ ನೆರವು ನೀಡಲು ಮಂಜೂರಾತಿ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಯಲ್ಲಿ ಕೊಡಗು ಜಿಲ್ಲೆಯ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಹ್ಮಣ್ಯ, ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
SCROLL FOR NEXT