ರಾಜ್ಯ

ಮಾಲೀಕ ಸಿದ್ಧಾರ್ಥ್ ಸಾವು; ಇಂದು ಕಾಫಿ ಡೇ ಕಾರ್ಯ ಸ್ಥಗಿತ, ಪ್ರಧಾನ ಕಚೇರಿಯಲ್ಲಿ ನಿರ್ದೇಶಕರ ಮಹತ್ವದ ಸಭೆ!

Srinivasamurthy VN
ಬೆಂಗಳೂರು: ಮಾಲೀಕ ಸಿದ್ಧಾರ್ಥ್ ಸಾವಿನ ಬೆನ್ನಲ್ಲೇ ಸಿದ್ಧಾರ್ಥ್ ಸ್ಮರಣಾರ್ಥ ಇಂದು ದೇಶದ ಎಲ್ಲ ಕಾಫಿ ಡೇ ಔಟ್ ಲೆಟ್ ಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇಂದು ಬೆಳಗ್ಗೆ ಮಂಗಳೂರಿನ ನೇತ್ರಾವತಿ ನದಿಯ ಹೊಯ್ಗೆ ಬಜಾರ್ ಜಾಗದಲ್ಲಿ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾಗಿದ್ದು, ಅವರ ದೇಹ ಪತ್ತೆಯಾದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ದೇಶಾದ್ಯಂತ ಇರುವ ಎಲ್ಲ ಕಾಫಿ ಡೇ ಔಟ್ ಲೆಟ್ ಗಳ ಸೇವೆಯನ್ನು ಸ್ಥಗಿತಗೊಳಿಸಿ ಕೆಲಸಗಾರರಿಗೆ ರಜೆ ಘೋಷಣೆ ಮಾಡಲಾಗಿದೆ. ಸಂಸ್ಛೆಯ ಮೂಲಗಳ ಪ್ರಕಾರ ಇಂದು 240 ನಗರಗಳಲ್ಲಿರುವ ಸುಮಾರು 1,750 ಔಟ್ ಲೆಟ್ ಗಳನ್ನು ಮುಚ್ಚಲಾಗಿದ್ದು, ಎಲ್ಲ ಔಟ್ ಲೆಟ್ ಗಳಲ್ಲಿ ಸಿದ್ಧಾರ್ಥ್ ಅವರ ಸ್ಮರಣಾರ್ಥ ಅವರ ಭಾವಚಿತ್ರವಿರಿಸಿ ಪುಷ್ಪ ನಮನ ಸಲ್ಲಿಸಲಾಗಿದೆ.
ಇನ್ನು ಸಿದ್ಧಾರ್ಥ್ ಅವರ ನಾಪತ್ತೆ ಬೆನ್ನಲ್ಲೇ ನಿಗದಿಯಾಗಿದ್ದ ಸಂಸ್ಥೆಯ ನಿರ್ದೇಶಕರ ಸಭೆ ಕೂಡ ಆರಂಭವಾಗಿದ್ದು, ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಕೆಫೆ ಕಾಫಿ ಡೇ ಪ್ರಧಾನ ಕಚೇರಿಯಲ್ಲಿ ಸಂಸ್ಥೆಯ ಎಲ್ಲ ನಿರ್ದೇಶಕರು ಸಭೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಅಧಿಕಾರಿಯೊಬ್ಬರು, ಕಂಪನಿಯು ವೃತ್ತಿಪರ ನಾಯಕತ್ವ ಹೊಂದಿದೆ. ಸಮರ್ಥವಾಗಿ ಮುನ್ನಡೆಯುತ್ತಿದೆ. ಎಂದಿನಂತೆ ತನ್ನ ವ್ಯವಹಾರ ಮುಂದುವರಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ ಈ ಹಿಂದೆ ಅಂದರೆ ಜೂನ್ 2019ಕ್ಕೆ ಅಂತ್ಯಗೊಂಡ ಎರಡನೇ ತ್ರೈಮಾಸಿಕದ ಫಲಿತಾಂಶಗಳನ್ನು ಪ್ರಕಟಿಸುವ ಉದ್ದೇಶದಿಂದ ಸಭೆ ಕರೆಯಲಾಯಿತು. ಕೆಫೆ ಕಾಫಿ ಡೇ ಕಂಪೆನಿಯನ್ನು ಕೋಕಾಕೋಲಾಕ್ಕೆ ಮಾರುವ ಮಾತುಕತೆಗಳ ಸ್ಥಿತಿಗತಿಗಳ ವಿಚಾರವೂ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ.
SCROLL FOR NEXT