ರಾಜ್ಯ

ಸಿದ್ಧಾರ್ಥ್ ಸಾವಿಗೆ ತೆರಿಗೆ ಅಧಿಕಾರಿಗಳ ಕಿರುಕುಳವೇ ಕಾರಣ: ಶಾಸಕ ರಾಜೇಗೌಡ ಗಂಭೀರ ಆರೋಪ

Srinivasamurthy VN
ಮಂಗಳೂರು: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಾವಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಶೃಂಗೇರಿ ಶಾಸಕ ಟಿಡಿ ರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರಿನ ನೇತ್ರಾವತಿ ನದಿಯಲ್ಲಿ ಉದ್ಯಮಿ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜೇಗೌಡ ಅವರು ಸಿದ್ಧಾರ್ಥ್ ಸಾವಿಗೆ ಕಂಬನಿ ಮಿಡಿದರು. ತೀರಾ ಭಾವಕರಾಗಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ನಾನು ಸಿದ್ಧಾರ್ಥ್ ನನ್ನು ಬಲ್ಲೆ. ಆತ ಮತ್ತು ಆತನ ಕುಟುಂಬಸ್ಥರು ನಮಗೆ ತೀರ ಹತ್ತಿರದವರಾಗಿದ್ದರು. ಕಳೆದ ಐದು ದಿನಗಳ ಹಿಂದೆ ಕೂಡ ಆತ ನನಗೆ ಸಿಕ್ಕಿ ತೆರಿಗೆ ಅಧಿಕಾರಿಗಳ ವಿಚಾರಣೆ ಕುರಿತಂತೆ ಅಸಮಾಧಾನಗೊಂಡಿದ್ದ. ಇದೇ ಕಾರಣಕ್ಕೆ ತನ್ನ ಕೆಲ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿದ್ದ. ಆ ಮೂಲಕ ತಾನು ಮಾಡಿಕೊಂಡಿದ್ದ ಸಾಲ ತೀರಿಸಬೇಕು ಎಂದುಕೊಂಡಿದ್ದ ಎಂದು ಹೇಳಿದ್ದಾರೆ.
ಅಂತೆಯೇ ಸಾಲದಿಂದಾಗಿಯೇ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ರಾಜೇಗೌಡ.. ಯಾರು ಹೇಳಿದ್ದು ನಿಮಗೆ.. ಆತನ ಸಾಲಕ್ಕಿಂತ ಆತನ ಆಸ್ತಿ-ಪಾಸ್ತಿ, ಆದಾಯವೇ ನೂರುಪಟ್ಟು ಹೆಚ್ಚಿತ್ತು. ಕೇವಲ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಿರುಕುಳದಿಂದಲೇ ಸಿದ್ದಾರ್ಥ ಅವರಿಗೆ ಹೀಗೆಲ್ಲಾ ಆಗಿದ್ದು ಎಂದು ಗಳಗಳನೆ ಅತ್ತರು.
'ಸಿದ್ದಾರ್ಥ ಅವರು ನನ್ನ ಹಿತೈಷಿಗಳು. ನಾನು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೆ. ಸಿದ್ಧಾರ್ಥ್ ತುಂಬಾ ಶಿಸ್ತಿನ ವ್ಯಕ್ತಿ. ಯಾರೊಂದಿಗೂ ತಾಳ್ಮೆ ಕಳೆದುಕೊಂಡವರಲ್ಲ. ಆದರೆ, ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯ ನಂತರ ಅವರು ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದರು. ಅಧಿಕಾರಿಗಳ ಕಿರುಕುಳದಿಂದಲೇ ಸಿದ್ದಾರ್ಥ್ ಅವರಿಗೆ ಈ ಸ್ಥಿತಿ ಬಂತು. ಸಿದ್ದಾರ್ಥ ದೊಡ್ಡ ಶ್ರೀಮಂತರಾಗಿದ್ದರೂ ಸರಳ ಜೀವಿ. ಗ್ರಾಮೀಣ ಜನರೊಂದಿಗೆ ಯಾವುದೇ ಅಹಂ ಇಲ್ಲದೆ ಬೆರೆಯುತ್ತಿದ್ದರು. ಅವರಿಗೆ ಈ ಸ್ಥಿತಿ ಬರಬಾರದಾಗಿತ್ತು ಎಂದು ರಾಜೇಗೌಡ ಹೇಳಿದ್ದಾರೆ.
ಅಂತೆಯೇ ಕಾಫಿ ಡೇ ಸಂಸ್ಛೆ ಕುರಿತು ಮಾತನಾಡಿದ ಅವರು, ಕಾಫಿ ಡೇ ಸಂಸ್ಥೆ ಸ್ಥಾಪಿಸಿ ಸಾವಿರಾರು ನಿರುದ್ಯೋಗಿಗಳಿಗೆ ಕೆಲಸ ನೀಡಿದ್ದಾರೆ. ದೇಶದ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಇದು ದೇಶಸೇವೆ ಕೆಲಸ ಅಲ್ಲವೇ? ಐಟಿಯವರೇನು ಮಿಲಿಟರಿ ಅವರೇ? ಪ್ರಾಮಾಣಿಕವಾಗಿ ತೆರಿಗೆ ಕಟ್ಟಿದರೂ ಇವರ ಕಿರುಕುಳ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
SCROLL FOR NEXT