ರಾಜ್ಯ

ವಿಜಿ ಸಿದ್ಧಾರ್ಥ್ ಸಾವು: ಇದು ಅತ್ಯಂತ ನೋವಿನ ಸಂಗತಿ, ಬಹಳ ಬೇಸರವಾಗ್ತಿದೆ: ಯುಟಿ ಖಾದರ್

Srinivasamurthy VN
ಮಂಗಳೂರು: ಕೆಫೆ ಕಾಫಿ ಡೇ ಸಂಸ್ಥೆಯ ಮಾಲೀಕ ವಿಜಿ ಸಿದ್ಧಾರ್ಥ್ ಅವರ ಸಾವಿನಿಂದಾಗಿ ತೀವ್ರ ದುಃಖವಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಯುಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸಿದ್ಧಾರ್ಥ್ ಅವರ ಪತ್ತೆ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದ ಯುಟಿ ಖಾದರ್ ಅವರು ಮೃತದೇಹ ಪತ್ತೆಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಖಾದರ್ ಅವರು, 'ಇದು ಅತ್ಯಂತ ನೋವಿನ ಸಂಗತಿ ಹಾಗೂ ಬಹಳ ಬೇಸರವಾಗುತ್ತಿದೆ. ಸಿದ್ಧಾರ್ಥ್ ಅವರು ಈ ರೀತಿ ನಮಗೆ ಸಿಕ್ಕಿದ್ದು, ಒಂದು ರೀತಿಯಲ್ಲಿ ಬೇಸರ ಆಗುತ್ತಿದೆ. ಮೊದಲು ಸಿದ್ಧಾರ್ಥ್ ಮೃತದೇಹವನ್ನು ಸ್ಥಳೀಯರು ನೋಡಿದ್ದಾರೆ. ಮೃತದೇಹವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂಬುದು ಚರ್ಚೆ ಮಾಡುತ್ತೇವೆ. ಅದಕ್ಕೂ ಮೊದಲು ಕೆಲವು ಪ್ರಕ್ರಿಯೆ ಇದೆ. ಅದನ್ನು ಮುಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡರಾತ್ರಿವರೆಗೆ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಮುಂಜಾನೆ 4 ಗಂಟೆ ಸುಮಾರಿನಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿರುವ ಕುರಿತು ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಪತ್ತೆಯಾಗಿದ್ದಾರೆ. ಮಂಗಳಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆಯಿದೆ. ಆ ರಸ್ತೆಯಲ್ಲಿ ಹೊಯಿಗೆ ಬಜಾರ್ ಎಂಬ ಪ್ರದೇಶವಿದೆ. ಇಲ್ಲಿ ನದಿ ಒಂದು ಕಡೆಯಿಂದ ಮಂಗಳೂರು ಬಂದರನ್ನು ತಲುಪುತ್ತದೆ. ಇನ್ನೊಂದು ಕಡೆಯಿಂದ ಸಮುದ್ರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಸಿಕ್ಕಿದೆ.
SCROLL FOR NEXT