ರಾಜ್ಯ

'ಸಿದ್ಧಾರ್ಥ್ ಪ್ರಕರಣಕ್ಕೆ ನಾವು ಕಾರಣರಲ್ಲ, ಅವರ ಆರೋಪಗಳು ಸತ್ಯಕ್ಕೆ ದೂರವಾದದ್ದು'

Srinivasamurthy VN
ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ್ ಅವರು ಆದಾಯ ತೆರಿಗೆ ಇಲಾಖೆ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು, ಆವರ ಆರೋಪಗಳಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೆಫೆ ಕಾಫಿ ಡೇ ಸಂಸ್ಥೆಯ ಮಾಲೀಕ ಸಿದ್ಧಾರ್ಥ್ ಅವರ ಮೃತ ದೇಹ ಇಂದು ಬೆಳಗ್ಗೆ ನೇತ್ರಾವತಿ ನದಿಯ ಹೊಯ್ಗೆ ಬಜಾರ್ ಪ್ರದೇಶದಲ್ಲಿ ಪತ್ತೆಯಾಗಿದ್ದು, ಅವರ ಸಾವಿಗೆ ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿದೆ. ಈ ಹಿಂದೆ ಸಿದ್ಧಾರ್ಥ್ ಅವರು ಬರೆದಿದ್ದ ಪತ್ರದಲ್ಲೂ ಅವರು ಆದಾಯ ತೆರಿಗೆ ಇಲಾಖೆ ಕುರಿತು ಹಲವು ಆರೋಪಗಳನ್ನು ಮಾಡಿದ್ದರು. ಇದೀಗ ಈ ಎಲ್ಲ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಆದಾಯ ಇಲಾಖೆ, ಸಿದ್ಧಾರ್ಥ್ ಅವರು ಆದಾಯ ತೆರಿಗೆ ಇಲಾಖೆ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು, ಆವರ ಆರೋಪಗಳಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಮಾಧ್ಯಮಗಳಿದೆ ಸ್ಪಷ್ಟನೆ ನೀಡಿರುವ ಆದಾಯ ಇಲಾಖೆ, 'ಕೆಫೆ ಕಾಫಿ ಡೇ ಕಂಪನಿಯ ಮಾಲೀಕ ಸಿದ್ದಾರ್ಥ ಹೆಗಡೆ ಅವರ ಆಸ್ತಿ ತಪಾಸಣೆ ನಡೆಸಿ ದಂಡ ವಿಧಿಸಿದ್ದು ನಿಜ. ಆದರೆ ಅವರಿಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ. ಸಿದ್ದಾರ್ಥ ಅವರು ದೊಡ್ಡಮೊತ್ತದ ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗಿತ್ತು. ಸಿದ್ದಾರ್ಥ ಅವರು ಘೋಷಿಸಿಕೊಂಡಿದ್ದ ಆಸ್ತಿಯ ಒಟ್ಟು ಮೊತ್ತ ಮತ್ತು ನಾವು ವಿಧಿಸಿದ್ದ ದಂಡದ ಮೊತ್ತವನ್ನು ತಕ್ಷಣಕ್ಕೆ ಹೇಳಲು ಸಾಧ್ಯವಿಲ್ಲ. ಆದರೆ ಸಿದ್ದಾರ್ಥ್ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಉಲ್ಲೇಖಿಸಿರುವಂತೆ ಆದಾಯ ತೆರಿಗೆ ಇಲಾಖೆ ಯಾವುದೇ ಕಿರುಕುಳ ನೀಡಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಂತೆಯೇ 'ಈ ಪತ್ರವನ್ನು ನಿಜವಾಗಿಯೂ ಅವರೇ ಬರೆದಿದ್ದ ಎನ್ನುವ ಬಗ್ಗೆ ತನಿಖೆ ನಡೆಯಬೇಕಿದೆ. ಅವರ ಸಹಿ ತಾಳೆಯಾಗುತ್ತಾ ಪರಿಶೀಲಿಸಬೇಕು. ನಂತರವಷ್ಟೇ ನಾವು ಅಧಿಕೃತ ಪ್ರತಿಕ್ರಿಯೆ ನೀಡಲು ಸಾಧ್ಯ. ಅಲ್ಲದೆ ಮೈಂಡ್‌ ಟ್ರೀ ವಹಿವಾಟಿನಲ್ಲಿ ಅಕ್ರಮ ನಡೆದಿರುವ ಸಂಬಂಧ ಆ ಷೇರುಗಳನ್ನು ಜಪ್ತಿ ಮಾಡಿದ್ದೆವು. ಅವರು ಮೈಂಡ್‌ ಟ್ರೀ ಷೇರುಗಳನ್ನು ಮಾರಬೇಕು ಎಂದಾಗ ಅದನ್ನು ಬಿಡುಗಡೆ ಮಾಡಿ, ಅವರು ಸೂಚಿಸಿದ ಬೇರೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡೆವು. ಕಾನೂನಿನ ವ್ಯಾಪ್ತಿಯಲ್ಲಿ ಆದಾಯ ತೆರಿಗೆ ಇಲಾಖೆಯು ಸಿದ್ದಾರ್ಥ ಅವರಿಗೆ ಎಲ್ಲ ರೀತಿಯಲ್ಲಿಯೂ ಸಹಕಾರ ನೀಡಿತ್ತು. ಹೀಗಾಗಿ ಅವರ ಪತ್ರದಲ್ಲಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದೆ.
ಮೈಂಡ್‌ ಟ್ರೀ ಷೇರುಗಳ ಮಾರಾಟದ ಮೂಲಕ ಸಿದ್ಧಾರ್ಥ್ ಮಾಲೀಕತ್ವದ ಸಂಸ್ಥೆ ಬರೊಬ್ಬರಿ 3,200 ಕೋಟಿ ರೂ ಆದಾಯ ಗಳಿಸಿತ್ತು. ಆದರೆ ಕೇವಲ 46 ಕೋಟಿ ರೂಗಳನ್ನು ಮಾತ್ರ ತೆರಿಗೆಯಾಗಿ ಪಾವತಿಸಿದೆ. ಆದರೆ ಸಿದ್ಧಾರ್ಥ್ (MAT) ಮ್ಯಾಟ್ ನಿಯಮದ (ಕನಿಷ್ಠ ಪರ್ಯಾಯ ತೆರಿಗೆ) ಅನುಸಾರ ಕನಿಷ್ಠ 300 ಕೋಟಿ ರೂ ಆದಾಯ ತೆರಿಗೆ ಪಾವತಿಸಬೇಕಿತ್ತು. ಈ ಕುರಿತಂತೆ ಅವರ ಕಚೇರಿಗಳಲ್ಲಿ ಶೋಧ ನಡೆಸಿದಾಗ ಅವರಿಂದ ಸುಮಾರು 250 ಕೋಟಿ ರೂಗೂ ಅಧಿಕ ತೆರಿಗೆ ವಂಚನೆ ಬಯಲಿಗೆ ಬಂದಿತ್ತು. ಅಂದಿನ ಕಾರ್ಯಾಚರಣೆಯಲ್ಲಿ ಸಿದ್ಧಾರ್ಥ್ ಅವರೇ 362.11  ಕೋಟಿ ರೂ ಗಳಷ್ಟು ಲೆಕ್ಕವಿಲ್ಲದ ಆದಾಯ ಮತ್ತು 118.02 ಕೋಟಿ ರೂ. ನಗದು ಹಣ ಇದೆ ಎಂದು ಘೋಷಣೆ ಮಾಡಿಕೊಂಡಿದ್ದರು. ಅಲ್ಲದೆ ಈ ಹಣ ಕಾಫಿ ಡೇ ಸಂಸ್ಥೆಗೆ ಸೇರಿದ್ದು ಎಂದು ಹೇಳಿದ್ದರು. ಆದರೆ ಈ ಸಂಬಂಧ ಯಾವುದೇ ರೀತಿಯ ದಾಖಲೆಗಳು ಇರಲಿಲ್ಲ ಎಂದು ಹೇಳಿದ್ದಾರೆ.
SCROLL FOR NEXT