ಮಂಗಳೂರು: ಫೇಸ್‌ಬುಕ್ ನಲ್ಲಿ ಪ್ರೀತಿಸಿದ ಯುವತಿಯನ್ನು ಪಿಜಿಯಲ್ಲಿ ಕೊಂದ!
ಮಂಗಳೂರು: ಫೇಸ್‌ಬುಕ್ ಪ್ರೀತಿ ಕೆಲವು ಬಾರಿ ಬಾಳಿಗೆ ಹೊಸ ಬೆಳಕಾದರೆ ಇನ್ನೂ ಹಲವು ಬಾರಿ ಬದುಕಿಗೆ ಕೊಳ್ಳಿಯಿಟ್ಟಿರುವುದನ್ನು ನಾವು ಕಾಣಬಹುದು. ಇದೇ ರೀತಿಯ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಮೂಲದ ವಿದ್ಯಾರ್ಥಿಯನ್ನು ಮಂಗಳೂರು ಅತ್ತಾವರದ ಪೇಯಿಂಗ್ ಗೆಸ್ಟ್ ಕೊಠಡಿಯಲ್ಲಿ ಪ್ರಿಯಕರನೇ ಕೊಂದಿರುವ ಘಟನೆ ಕರಾವಳಿ ನಗರಿಯನ್ನು ಬೆಚ್ಚಿ ಬೀಳಿಸಿದೆ. ಇನ್ನು ಯುವತಿ ಕೊಲೆ ನಡೆದು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರಿಕೆರೆ ಮೂಲದ ವೈ.ಎನ್. ಮಂಜುನಾಥ್ ಎಂಬುವವರ ಮಗಳಾದ ಅಂಜನಾ ವಸಿಷ್ಟ (22) ಎಂಬಾಕೆಯನ್ನು ಅವಳ ಫೇಸ್‌ಬುಕ್ ಪ್ರಿಯಕರ ವಿಜಯಪುರ ಜಿಲ್ಲೆ ಸಿಂಧಗಿ ಮೂಲದ ಸಂದೀಪ್ ರಾಥೋಡ್ (24) ಹತ್ಯೆ ಮಾಡಿದ್ದಾನೆ. ಅತ್ತಾವರದ ಮೆಡಿಕಲ್ ಕಾಲೇಜೊಂದರ ಸಮೀಪದ ಪಿಜಿಯಲ್ಲಿ ಅಂಜನಾ ಕುತ್ತಿಗೆಗೆ ವಯರ್ ನಿಂದ ಬಿಗಿದು ಹತ್ಯೆ ಮಾಡಿದ್ದು ಮೃತದೇಹವು ಶುಕ್ರವಾರ ಸಂಜೆ ಪತ್ತೆಯಾಗಿತ್ತು.
ಚಿಕ್ಕಮಗಳೂರಿನ ಅಂಜನಾ ಬ್ಯಾಂಕಿಂಗ್ ಕೋಚಿಂಗ್ ಪಡೆಯುವ ಸಲುವಾಗಿ ಮಂಗಳೂರಿಗೆ ಆಗಮಿಸಿದ್ದಾಗ ಘಟನೆ ನಡೆದಿದೆ.
ಅಂಜನಾ ಉಜಿರೆಯ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದಾಗ ವಿಜಯಪುರದ ಸಂದೀಪ್ ರಾಥೋಡ್ ಪರಿಚಯವಾಗಿತ್ತು. ಫೇಸ್‌ಬುಕ್ ಮೂಲಕ ಇಬ್ಬರ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು.ಆಗ ಬ್ಯಾಂಕಿಂಗ್ ಕೋಚಿಂಗ್ ಗಾಗಿ ಅಂಜನಾ ಮಂಗಳೂರಿಗೆ ಬಂದಿದ್ದಾಗ ಸಂದೀಪ್ ಸಹ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕ ಪರೀಕ್ಷೆಗೆ ತರಬೇತಿಗಾಗಿ ನಗರಕ್ಕೆ ಬಂದಿದ್ದನು.ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಮಂಗಳೂರಿನಲ್ಲಿ ಒಂದೇ ಕೊಠಡಿಯಲ್ಲಿರಲು ಮುಂಚೆಯೇ ಒಪ್ಪಿಕೊಂಡಿದ್ದರು. ಅದರಂತೆ ಇಬ್ಬರೂ ಅತ್ತಾವರದ ಪಿಜಿಯಲ್ಲಿ ಕೋಣೆ ಹಿಡಿದ್ದಾರೆ.
ಜೂ.2ರಂದು ಅತ್ತಾವರ ಲೂಯಿಸ್ ಎಂಬುವವರ ಮನೆಗೆ ಹೋಗಿ ತಾವಿಬ್ಬರೂ ವಿವಾಹವಾಗಿದ್ದೇವೆ ಎಂದು ಸುಳ್ಳು ಹೇಳಿ ಈ ಜೋಡಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದಾರೆ. ಅಲ್ಲದೆ ಅಂಜನಾ ತನ್ನ ಪೋಷಕರಿಗೆ ಸಹ ಮಂಗಳೂರಿನಲ್ಲಿ ನನಗೆ ಇನ್ನೂ ಬೇರೊಂದಷ್ಟು ಕೆಲಸವಿದೆ ಎಂದು ಸುಳ್ಳು ಹೇಳಿ ತನ್ನೊಡನೆ ಹೊರಟಿದ್ದ ಪೋಷಕರನ್ನು ಒಂದು ದಿನ ತಡವಾಗಿ ಆಗಮಿಸುವಂತೆ ಹೇಳಿದ್ದಳು. ಇದು ಅಂದೀಪ್ ಹಾಗೂ ಅಂಜನಾ ನಡುವೆ ವಿವಾಹ ಸಂಬಂಧವಿತ್ತೆ ಎಂಬ ಬಗ್ಗೆ ಸಂಶಯ ಹುಟ್ಟುಹಾಕಿದೆ
ಇನ್ನು ಹೀಗೆ ಕುಂಟು ನೆಪ ಹೇಳಿ ಗುರುವಾರ ಸಂಜೆಯೇ ಮನೆ ಬಿಟ್ಟಿದ್ದ ಅಂಜನಾ ನೇರವಾಗಿ ಸಂದೀಪನನ್ನು ಭೇಟಿಯಾಗಿದ್ದಾಳೆ. ಇಬ್ಬರೂ ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ಆದರೆ ಅಲ್ಲಿ ಇಬ್ಬರ ನಡುವೆ ಯಾವುದೋ ಕಾರಣದಿಂದ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಆಗ ಜಗಳ ವಿಕೋಪಕ್ಕೆ ಹೋಗಿದ್ದು ಆರೋಪಿ ಸಂದೀಪ್ ಆಕೆಯನ್ನು ವಯರ್ ನಿಂದ ಕುತ್ತಿಗೆ ಬಿಗಿದು ಕೊಂದಿದ್ದಾನೆ. ಆ ಬಳಿಕ ಆಕೆಯ ಮೊಬೈಲ್, ಕರಿಮಣಿ ತಾಳಿ, ಬಾಡಿಗೆ ಕೊಠಡಿ ಕೀ ಸಮೇತ ಪರಾರಿಯಾಗಿದ್ದಾನೆ. ಮೊಬೈಲ್ ನೆಟ್ ವರ್ಕ್ ಆಧಾರದಲ್ಲಿ ತನಿಖೆ ಕೈಗೊಂಡ ಪೋಲೀಸರು ಆರೊಪಿ ಶಿರಸಿ ಮಾರ್ಗವಾಗಿ ಸಿಂಧಗಿಗೆ ತೆರಳಿರುವುದನ್ನು ಪತ್ತೆ ಮಾಡಿದ್ದಾರೆ.ಕೂಡಲೇ ಸಿಂಧಗಿ ಪೋಲೀಸರ ಸಹಕಾರದೊಡನೆ ಶನಿವಾರವೇ ಲಾಡ್ಜ್ ಒಂದರಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos