ರಾಜ್ಯ

ಪರೀಕ್ಷೆ ಪಾಸಾಗಲು ಹಣ ಕೊಟ್ಟರೆ ಅದು ತಿರುಪತಿ ಹುಂಡಿಗೆ: ಹೆಚ್.ಡಿ.ರೇವಣ್ಣ

Srinivas Rao BV
ಬೆಂಗಳೂರು: ಇಲಾಖೆಯಲ್ಲಿ ಖಾಲಿ ಇರುವ ಇಂಜಿನಿಯರ್ ಗಳ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪರೀಕ್ಷೆ ನಡೆಸಿ ಭರ್ತಿಮಾಡಿಕೊಳ್ಳುತ್ತಿದ್ದು, ಪರೀಕ್ಷೆಯಲ್ಲಿ ಹಣ ಕೊಟ್ಟು ಉತ್ತೀರ್ಣರಾಗಲು ಪ್ರಯತ್ನಿಸಿದರೆ ಅಂತಹವರ ಹಣ ತಿರುಪತಿ ಹುಂಡಿಗೆ ಹೋದಂತೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದ್ದಾರೆ.  
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಜೂನ್ 21 ರಿಂದ 23 ರವರೆಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಇದಕ್ಕಾಗಿ ಪರೀಕ್ಷಾ ಪ್ರಾಧಿಕಾರ ಅಗತ್ಯ ಸಿದ್ಧತೆ ಕೈಗೊಂಡಿದೆ. ಇದರಲ್ಲಿ ಇಲಾಖೆಯ ಯಾವುದೇ ಪಾತ್ರವಿಲ್ಲ ಎಂದರು.  
750 ಹಿರಿಯ, 350 ಕಿರಿಯ ಅಭಿಯಂತರರ ಹುದ್ದೆಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಒಟ್ಟು 200 ಅಂಕಗಳಿಗೆ ಪರೀಕ್ಷೆ ಬರೆಯಬೇಕಾಗುತ್ತದೆ.  ಯಾರ ಹಸ್ತಕ್ಷೇಪ ಅಥವಾ ಅಕ್ರಮವಿಲ್ಲದೆ ಪರೀಕ್ಷೆ ನಡೆಯಬೇಕು. ಒಂದು ವೇಳೆ ಪರೀಕ್ಷೆ ಸಮಯದಲ್ಲಿ ಅಕ್ರಮಗಳು ನಡೆದಲ್ಲಿ ಅದಕ್ಕೆ ಸಂಬಂಧಪಟ್ಟವರನ್ನೇ ಹೊಣೆ ಮತ್ತು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಪರೀಕ್ಷಾ ಪ್ರಾಧಿಕಾರದ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ ಸಚಿವರು ಸ್ಪಷ್ಟಪಡಿಸಿದರು.
ಯಾರ ಶಿಫಾರಸು ಇಲ್ಲದೇ ನೇರವಾಗಿ ಪರೀಕ್ಷೆ ಬರೆದು ಅರ್ಹರಾದವರು ಮಾತ್ರ ಲೋಕೋಪಯೋಗಿ ಇಲಾಖೆಗೆ ಸೇರಬಹುದಾಗಿದೆ.  ಪರೀಕ್ಷೆಯಲ್ಲಿ ತೇರ್ಗಡೆಯಾಗಲು, ಇಲಾಖೆ ಅಭಿಯಂತರರಾಗಿ ಸೇವೆ ಸಲ್ಲಿಸಲು ಹಣ ಕೊಟ್ಟು, ಕಳೆದುಕೊಂಡರೆ ಅದಕ್ಕೆ ಅಭ್ಯರ್ಥಿಗಳೇ ಹೊಣೆ. ಹಣ ಕೊಟ್ಟರೆ ಅದು ತಿರುಪತಿ ಹುಂಡಿಗೆ ಹೋದಂತೆ ಎಂದು ಹೆಚ್.ಡಿ.ರೇವಣ್ಣ ಎಚ್ಚರಿಸಿದರು.
SCROLL FOR NEXT