ರಾಜ್ಯ

ಅಧಿಕಾರಿಗಳು ಯಾವುದೇ ಪ್ರಭಾವ, ಒತ್ತಡಕ್ಕೆ ಮಣಿಯಬೇಡಿ: ಸಿಎಂ ಕುಮಾರಸ್ವಾಮಿ

Sumana Upadhyaya
ಬೆಂಗಳೂರು: ಯಾವುದೇ ಪ್ರಭಾವಕ್ಕೆ ಒಳಗಾಗದೆ ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಅವರು ನಿನ್ನೆ ಬೆಂಗಳೂರಿನಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳ ಸಮ್ಮೇಳನದ ಮುಕ್ತಾಯ ಭಾಷಣದಲ್ಲಿ ಮಾತನಾಡಿ ಚುನಾಯಿತ ಜನಪ್ರತಿನಿಧಿಗಳ ಒತ್ತಡ ಅಧಿಕಾರಿಗಳ ಮೇಲಿರುತ್ತದೆ. ಆದರೆ ಸರ್ಕಾರದ ಯೋಜನೆಗಳನ್ನು ಜಾರಿ ಮಾಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅಧಿಕಾರಿಗಳು ತಮ್ಮ ಕೆಲಸದಲ್ಲಿ ರಾಜಿ ಮಾಡಿಕೊಳ್ಳಬೇಡಿ ಎಂದರು.
ನಿಮ್ಮ ಕೆಲಸಗಳನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ಯಾವುದೇ ಪ್ರಭಾವಕ್ಕೆ ಒಳಗಾಗದೆ ಮಾಡಿ ಎಂದು ಸಿಎಂ ಕಿವಿಮಾತು ಹೇಳಿದರು.
ಎರಡು ದಿನಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಿಇಒಗಳ ಸಭೆಯ ಉಸ್ತುವಾರಿಯನ್ನು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಮತ್ತು ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ವಹಿಸಿದ್ದರು. ಸರ್ಕಾರದ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದ 150ಕ್ಕೂ ಅಧಿಕ ವಿಷಯಗಳನ್ನು ಸಮ್ಮೇಳನದಲ್ಲಿ ಸಂಬಂಧಪಟ್ಟ ಸಚಿವರುಗಳು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಲಾಯಿತು. 
ರಾಜ್ಯದ ಬರ ಪರಿಸ್ಥಿತಿ. ಇ-ಆಡಳಿತ, ಸಾಮಾಜಿಕ ಕಲ್ಯಾಣ, ಉತ್ಪಾದನೆ, ಸಕ್ಕರೆ ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿ, ರೈತರ ಸಮಸ್ಯೆಗಳು, ಕುಡಿಯುವ ನೀರು ಪೂರೈಕೆ ಇತ್ಯಾದಿಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಅಧಿಕಾರಿಗಳಿಗೆ ಸಮರೋಪಾದಿಯಲ್ಲಿ ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಕುಡಿಯವ ನೀರಿನ ಸಮಸ್ಯೆಯಿದೆ ಎಂದು ನೋಡಿಕೊಂಡು ಅದನ್ನು ಬಗೆಹರಿಸಲು ವಿಶೇಷ ಒತ್ತು ನೀಡುವಂತೆ, ಮಳೆ ನೀರು ಕೊಯ್ಲು ವಿಧಾನಕ್ಕೆ, ನೀರಿನ ಸಂರಕ್ಷಣೆ ಮಹತ್ವ ಸಾರುವ ಕಾರ್ಯಕ್ರಮಗಳನ್ನು ನಡೆಸುವಂತೆ ಸೂಚಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿರಿಯ ನಾಗರಿಕರಿಗೆ ವೃದ್ಯಾಪ್ಯ ವೇತನ ಫಲಾನುಭವಿಗಳನ್ನು ಮನೆ ಮನೆಗೆ ತೆರಳಿ ಗುರುತಿಸುವಿಕೆಯು ಯಶಸ್ವಿಯಾಗಿ ಜಾರಿಗೆ ಬಂದ ನಂತರ ಉಳಿದ ಜಿಲ್ಲೆಗಳಲ್ಲಿ ಅದನ್ನು ಅನುಸರಿಸುವಂತೆ ಸೂಚಿಸಲಾಗಿದೆ.
SCROLL FOR NEXT