ರಾಜ್ಯ

ಭಾರತದಲ್ಲಿ ಉದ್ಯೋಗಕ್ಕೆ ಕೊರತೆಯಿಲ್ಲ, ವೇತನದ ಸಮಸ್ಯೆಯಿದೆ- ಮೋಹನ್ ದಾಸ್ ಪೈ

Nagaraja AB
ಬೆಂಗಳೂರು: ಭಾರತದಲ್ಲಿ ಉದ್ಯೋಗಕ್ಕೆ ಕೊರತೆಯಿಲ್ಲ, ಆದರೆ, ವೇತನದ ಸಮಸ್ಯೆಯಿದೆ ಎಂದು ಇನ್ಫೋಸಿಸ್ ಸಂಸ್ಥೆ ಮಾಜಿ ಸಿಎಫ್ ಒ ಹಾಗೂ ಬಹು-ವಲಯ ಹೂಡಿಕೆದಾರ ಟಿ . ವಿ. ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ.
 ಭಾರತ ಉತ್ತಮ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ, 10 ಸಾವಿರದಿಂದ 15 ಸಾವಿರ ರೂಪಾಯಿಯಷ್ಟು ಕಡಿಮೆ  ವೇತನ ಸಿಗುವ ಉದ್ಯೋಗಗಳನ್ನು ಸೃಷ್ಠಿಸುತ್ತಿದೆ. ಆದರೆ, ಇಂತಹ ಹುದ್ದೆಗಳನ್ನು ಪದವೀಧರರು ಇಷ್ಟಪಡುವುದಿಲ್ಲ ಎಂದು ಸುದ್ದಿಸಂಸ್ಥೆಯೊಂದಕ್ಕೆ ಅವರು ತಿಳಿಸಿದ್ದಾರೆ.
ಅಲ್ಲದೇ , ಭಾರತ ಪ್ರಾದೇಶಿಕ ಹಾಗೂ ಭೌಗೋಳಿಕವಾಗಿ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಮೋಹನ್ ದಾಸ್ ಪೈ ಹೇಳಿದ್ದಾರೆ.
ಭಾರತ ಉದ್ಯೋಗ ಆಕಾಂಕ್ಷಿಗಳನ್ನು ಆಕರ್ಷಿಸಲು ಸಂಶೋಧನಾ ಮತ್ತು ಅಭಿವೃದ್ಧಿ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುವುದರ ಜೊತೆಗೆ ಕರಾವಳಿ ತೀರ ಪ್ರದೇಶದಲ್ಲಿ ಮೂಲ ಸೌಕರ್ಯಗಳನ್ನು ನಿರ್ಮಿಸಬೇಕು ಹಾಗೂ ಕಾರ್ಮಿಕರನ್ನು ಬೇಡುವ ಕೈಗಾರಿಕೆಗಳನ್ನು ಸ್ಥಾಪಿಸಲು ಚೀನಾ ಮಾದರಿಯನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
2018ರಲ್ಲಿ 11 ಮಿಲಿಯನ್ ಉದ್ಯೋಗಗಳು ಕೊರತೆಯಾಗಿದೆ ಎಂದು ನಿರುದ್ಯೋಗದ ಬಗ್ಗೆ  ಭಾರತೀಯ ಆರ್ಥಿಕ ಮೇಲ್ವಿಚಾರಣಾ ಕೇಂದ್ರ ಹೊರಡಿಸಿರುವ  ಮಾಹಿತಿ ತಪ್ಪಾಗಿದೆ. ಪ್ರತಿ ವರ್ಷ 60 ರಿಂದ 70 ಲಕ್ಷ ಜನರು ಔಪಚಾರಿಕ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ ಎಂಬ ಇಪಿಎಫ್ ಒ ವೇತನದಾರರ ಮಾಹಿತಿ ಉತ್ತಮ ಮಾಹಿತಿಯಾಗಿದೆ ಎಂದಿದ್ದಾರೆ.
ವಾಹನಗಳ ಮಾರಾಟದಿಂದಲೂ ದೇಶದಲ್ಲಿನ ಉದ್ಯೋಗ ಪರಿಸ್ಥಿತಿಯನ್ನು ತಿಳಿಯಬಹುದಾಗಿದೆ, ವಾಹನ ಖರೀದಿಯಲ್ಲಿ ರಿಯಾಯಿತಿ ಮಾಡಿದ ನಂತರ ಪ್ರತಿ ವರ್ಷ 30 ರಿಂದ 35 ಲಕ್ಷ ಜನರು ಉದ್ಯೋಗಗಳನ್ನು ಪಡೆಯುತ್ತಿದ್ದಾರೆ ಎಂದು ಮೋಹನ್ ದಾಸ್ ಪೈ ತಿಳಿಸಿದ್ದಾರೆ.
SCROLL FOR NEXT