ರಾಜ್ಯ

ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಹೊತ್ತ ಕಿರುಹೊತ್ತಿಗೆ 'ಮೈತ್ರಿ ಪರ್ವ' ಬಿಡುಗಡೆ

Sumana Upadhyaya
ಬೆಂಗಳೂರು : ರಾಜ್ಯದ ಮೈತ್ರಿ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಸರ್ಕಾರದ ಸಾಧನೆಯನ್ನು ತಿಳಿಸುವ 'ಮೈತ್ರಿ ಪರ್ವ' ಪುಸ್ತಕವನ್ನು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಒಟ್ಟಿಗೆ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದಿರುವ 'ಮೈತ್ರಿ ಪರ್ವ' ಕಿರುಹೊತ್ತಿಗೆ ಪುಸ್ತಕದಲ್ಲಿ, ಪ್ರತಿ ಸಚಿವರ ಇಲಾಖೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು, ಕಾಮಗಾರಿಗಳ ವಿವರವನ್ನು ಒಳಗೊಂಡಂತೆ, ಒಂದು ವರ್ಷದ ಮೈತ್ರಿ ಸರ್ಕಾರದ ಸಾಧನೆಯನ್ನು ತಿಳಿಸಲಾಗಿದೆ.
ಕೃಷಿ ಸಾಲಮನ್ನಾ, ಕೃಷಿ ಕ್ಷೇತ್ರ, ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ನೀಡಿರುವ ಆದ್ಯತೆ, ಆರೋಗ್ಯ ಕ್ಷೇತ್ರದ ಬಲಪಡಿಸುವಿಕೆ, ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಸರ್ಕಾರದ ಪಾತ್ರ, ಮಾತೃಶ್ರೀ ಯೋಜನೆ, ಬಡವರ ಬಂಧು ಯೋಜನೆ ಬಗ್ಗೆ ತಿಳಿಸಿಕೊಡಲಾಗಿದೆ.
ಶಾಲಾ ಸಂಪರ್ಕ ಸೇತುವಿನ ಮೂಲಕ ಮಲೆನಾಡಿನ ಹಳ್ಳಿಗಳಲ್ಲಿ ಹಳ್ಳ ದಾಟಲು ಕಾಲು ಸಂಕ ನಿರ್ಮಿಸಿದ ಬಗ್ಗೆ ಮಾಹಿತಿ, ಆರೋಗ್ಯ ಕ್ಷೇತ್ರದಲ್ಲಿನ ನಿರಂತರ ಆರೋಗ್ಯಕ್ಕೆ ನೀಡಲಾದ ಒತ್ತು, ಮೇಕೆದಾಟು ಮತ್ತು ಮಹದಾಯಿ ನೀರಾವರಿ ಯೋಜನೆಗಳ ರಾಜ್ಯ ಸರ್ಕಾರದ ಪಾತ್ರ, ಕರ್ನಾಟಕದಲ್ಲಿ ಇಂಧನ ಕ್ಷೇತ್ರದ ಅಭಿವೃದ್ಧಿ, ಬೆಂಗಳೂರನ್ನು ಬಲ ಪಡಿಸಲು ರಾಷ್ಟ್ರೀಯ ನಗರವಾಗಿ ರೂಪಿಸಲು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಪ್ರಗತಿಗಾಗಿ ಕೈಗೊಂಡ ಕ್ರಮಗಳ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಸಚಿವ ಸಂಪುಟದ ಸದಸ್ಯರು,ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
SCROLL FOR NEXT