ರಾಜ್ಯ

ಶಿವಾಜಿನಗರದಲ್ಲಿರುವ ಐಎಂಎ ಲಾಕರ್ ಓಪನ್ ಮಾಡಿದ ಎಸ್ಐಟಿ, 30 ಕೆಜಿ ಚಿನ್ನಾಭರಣ ಜಪ್ತಿ

Lingaraj Badiger
ಬೆಂಗಳೂರು: ಐಎಂಎ ಜುವೆಲ್ಸ್ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಸೋಮವಾರ ಶಿವಾಜಿನಗರದಲ್ಲಿನ ಆಭರಣ ಮಳಿಗೆಯಲ್ಲಿದ್ದ ಲಾಕರ್ ಓಪನ್ ಮಾಡಿ, ಅದರಲ್ಲಿದ್ದ ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ಚಿನ್ನಾಭರಣ ಮತ್ತು ಹಲವು ದಾಖಲೆಗಳನ್ನು ಜಪ್ತಿ ಮಾಡಿದೆ.
ಇತ್ತೀಚಿಗೆ ಆಭರಣ ಮಳಿಗೆಯಲ್ಲಿನ ಚಿನ್ನ, ಬೆಳ್ಳಿ ಮತ್ತು ಡೈಮಂಡ್ ಜಪ್ತಿ ಮಾಡಿದ್ದ ಎಸ್ ಐಟಿ ತಂಡ ಇಂದು ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಐಎಂಎ ಗೋಲ್ಡ್ ಮಳಿಗೆಯ ಲಾಕರ್ ತೆರೆದು ಪರಿಶೀಲಿಸಿದ್ದು, ಸುಮಾರು 30 ಕೆಜಿ ಚಿನ್ನಾಭರಣ ಪತ್ತೆಯಾಗಿದೆ.
ಲಾಕರ್ ನಲ್ಲಿ ಸಿಕ್ಕ ಚಿನ್ನಾಭರಣ ಗ್ರಾಹಕರ ಅಡವಿಟ್ಟಿದ್ದೋ ಅಥವಾ ಸ್ವತಃ ತಯಾರಿಸಿದ್ದೋ ಎಂಬುದನ್ನು ಪರಿಶೀಲನೆ ನಡೆಸಬೇಕಿದೆ ಎಂದು ಎಸ್ಐಟಿ ಅಧಿಕಾರಿ, ಡಿಸಿಪಿ ಗಿರಿಶ್ ಅವರು ಹೇಳಿದ್ದಾರೆ.
ಮೂಲಗಳು ಪ್ರಕಾರ, ಐಎಂಎ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಅವರು ದೇಶ ತೊರೆಯುವ ಮುನ್ನ ಗ್ರಾಹಕರು ಅಡವಿಟ್ಟಿದ್ದ ಚಿನ್ನವನ್ನು ಲಾಕರ್ ನಲ್ಲಿಟ್ಟಿದ್ದಾರೆ ಎನ್ನಲಾಗಿದೆ.
ಎಸ್ ಐಟಿ ಇತ್ತೀಚಿಗೆ ಐಎಂಎ ಜ್ಯುವೆಲ್ಸ್ ಸಂಸ್ಥೆಗೆ ಹಾಕಿದ್ದ ಬೀಗ ಮುದ್ರೆ ತೆರೆದು 20 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದೆ. ಅಲ್ಲದೆ ಜಯನಗರದಲ್ಲಿರುವ ಐಎಂಎ ಮಳಿಗೆಯನ್ನೂ ಸಹ ಪರಿಶೀಲಿಸಿ ಅಲ್ಲೂ ಸಹ ಚಿನ್ನಾಭರಣ ಮತ್ತು ವಜ್ರಾಭರಣಗಳನ್ನು ಎಸ್‍ಐಟಿ ವಶಪಡಿಸಿಕೊಂಡಿದೆ.
ಈ ಮಧ್ಯೆ ಎಸ್‍ಐಟಿ ದುಬೈನಲ್ಲಿ ಅಡಗಿರುವ ವಂಚಕ ಮನ್ಸೂರ್ ಖಾನ್ ಬಂಧನಕ್ಕಾಗಿ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ನಿನ್ನೆ ಐಎಂಎ ಜ್ಯುವೆಲ್ಸ್ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ಆಡಿಯೋ ಆಧಾರದ ಮೇಲೆ ತನಿಖಾ ತಂಡ ಐಎಂಎ ಜ್ಯುವೆಲ್ಸ್ ಮಳಿಗೆಗಳ ಶೋಧ ನಡೆಸುತ್ತಿದೆ ಎಂದು ತಿಳಿದುಬಂದಿದೆ.
SCROLL FOR NEXT