ರಾಜ್ಯ

ಅಕ್ರಮ ಆಸ್ತಿ ಪ್ರಕರಣ: ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣ ಕೈಬಿಡಲು ಕೋರ್ಟ್ ನಕಾರ

Lingaraj Badiger
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ಕೈಬಿಡಬೇಕು ಎಂದು ಕೋರಿ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ. 
ಪ್ರಕರಣ ಸಂಬಂಧ ಕಾಯ್ದಿರಿಸಿದ್ದ ತೀರ್ಪನ್ನು ಮಂಗಳವಾರ ಪ್ರಕಟಿಸಿದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ, ಆದಾಯ ಇಲಾಖೆ ದಾಖಲಿಸಿರುವ ದೂರಿನಲ್ಲಿ ಯಾವುದೇ ಲೋಪದೋಷಗಳಿಲ್ಲ ಎಂದು ಅಭಿಪ್ರಾಯಪಟ್ಟು ಡಿಕೆಶಿ ಅರ್ಜಿಯನ್ನು ವಜಾಗೊಳಿಸಿದರು.
ಅರ್ಜಿದಾರರು ಆದಾಯ ತೆರಿಗೆ ಕಾಯ್ದೆ–1961ರ ಕಲಂ 276 ಸಿ (1) ಮತ್ತು 277ರ ಅನುಸಾರ ಶಿಕ್ಷಾರ್ಹ ಅಪರಾಧ ಎಸಗಿದ್ದು, ಹೆಚ್ಚಿನ ತನಿಖೆಯ ಅಗತ್ಯವಿದೆ. ಈ ಹಂತದಲ್ಲಿ ಪ್ರಕರಣ ರದ್ದುಗೊಳಿಸಬಾರದು ಎಂದು ಆದಾಯ ತೆರಿಗೆ ಇಲಾಖೆ ಪರ ವಕೀಲರು ಮನವಿ ಮಾಡಿದ್ದರು.   
ಇದರಿಂದ ಡಿ.ಕೆ.ಶಿವಕುಮಾರ್ ಇದೇ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕಿದೆ. ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಚಿನ್‌ ನಾರಾಯಣ್, ಸುನಿಲ್ ಕುಮಾರ್ ಶರ್ಮ, ಎನ್‌.ರಾಜೇಂದ್ರ ಮತ್ತು ಆಂಜನೇಯ ಹನುಮಂತಯ್ಯ ಆರೋಪಿಗಳಾಗಿದ್ದಾರೆ.   
ಬೆಂಗಳೂರಿನಿಂದ ದೆಹಲಿಗೆ ಕಾನೂನು ಬಾಹಿರವಾಗಿ ಹಣ ಸಾಗಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು 2017ರ ಆಗಸ್ಟ್‌ 2ರಂದು ಡಿ.ಕೆ.ಶಿವಕುಮಾರ್‌ಗೆ ಸೇರಿದ ಬೆಂಗಳೂರು ಮತ್ತು ನವದೆಹಲಿಯ ಮನೆಗಳ ಮೇಲೆ ದಾಳಿ ನಡೆಸಿ 8.59 ಕೋಟಿ ನಗದನ್ನು ಜಪ್ತಿ ಮಾಡಿದ್ದರು. 
ಈ ಸಂಬಂಧ ಡಿ.ಕೆ.ಶಿವಕುಮಾರ್, ಸಚಿನ್‌ ನಾರಾಯಣ, ಸುನಿಲ್‌ ಕುಮಾರ್‌ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಎಂಬುವರ ವಿರುದ್ಧ ಆದಾಯ ತೆರಿಗೆ ಕಾಯ್ದೆ–1961ರ ಕಲಂ 277 ಮತ್ತು 278 ಹಾಗೂ ಭಾರತೀಯ ದಂಡ ಸಂಹಿತೆಯ ಕಲಂ 120 ಬಿ, 193 ಹಾಗೂ 199ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
SCROLL FOR NEXT