ನಳಿನ್ ಕುಮಾರ್ ಕಟೀಲ್, ಪಿಯೂಷ್ ಗೋಯಲ್
ನವದೆಹಲಿ: ಮಂಗಳೂರು-ಬೆಂಗಳೂರು ಮಧ್ಯೆ ಪ್ರಸ್ತುತ ವಾರಕ್ಕೆ ಮೂರು ದಿನ ಸಂಚರಿಸುವ ಮಂಗಳೂರು- ಯಶವಂತಪುರ ಎಕ್ಸ್ ಪ್ರೆಸ್ ರೈಲನ್ನು ಪ್ರತಿನಿತ್ಯ ಸಂಚರಿಸುವಂತೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಭರವಸೆ ನೀಡಿದ್ದಾರೆ.
ಮಂಗಳೂರು -ಬೆಂಗಳೂರು ಮಧ್ಯೆ ಸಂಚರಿಸುವ ರೈಲುಗಳ ವೇಗ ಹೆಚ್ಚಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರೈಲ್ವೆ ಸಚಿವರಿಗೆ ಮನವಿ ಮಾಡಿದರು. ತಕ್ಷಣಕ್ಕೆ ಪ್ರತಿನಿತ್ಯ ರೈಲು ಸಂಚರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ.
ಪ್ರತ್ಯೇಕ ಮಂಗಳೂರು ವಿಭಾಗ ರಚನೆ, ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಹೊಸ ಸುಸಜ್ಜಿತ ಕಟ್ಟಡ ನಿರ್ಮಾಣ ಹಾಗೂ ಇತರ ಮೂಲಸೌಕರ್ಯಗಳ ಅಭಿವೃದ್ಧಿ , ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ 3 ಮತ್ತು 4ನೇ ಪ್ಲಾಟ್ ಫಾರಂ ನಿರ್ಮಾಣ ಕಾಮಗಾರಿ ತ್ವರಿತಗೊಳಿಸುವುದು, ಮಂಗಳೂರು ಮೀರಜ್ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲನ್ನ ಪುನರ್ ಆರಂಭಿಸಿ ಮುಂಬೈವರೆಗೂ ವಿಸ್ತರಿಸಬೇಕೆಂದು ಮನವಿ ಮಾಡಿದರು.
ಇದಲ್ಲದೇ ಮಂಗಳೂರು- ಪೂನಾ ಮಧ್ಯೆ ಹೊಸ ರೈಲು, ಮೂಕಾಂಬಿಕಾ ರೋಡ್ ( ಬೈಂದೂರು) ಕಾಸರಗೋಡು ರೈಲನ್ನು ಪುನರ್ ಆರಂಭಿಸಿ ಗುರುವಾಯೂವರೆಗೆ ವಿಸ್ತರಿಸುವುದು, ಕಾರವಾರ - ಮಂಗಳೂರು ಜಂಕ್ಷನ್ ಮೂಲಕ ಯಶವಂತಪುರ ಮಧ್ಯೆ ಸಂಚರಿಸುವ ಹಗಲು ರೈಲನ್ನು ತಿರುಪತಿವರೆಗೆ ವಿಸ್ತರಿಸುವುದು,ಮಂಗಳೂರು- ತಿರುಪತಿ ಮಧ್ಯೆ ಹೊಸ ರೈಲು, ಮಂಗಳೂರಿನಿಂದ ಉತ್ತರ ಭಾರತದ ಪವಿತ್ರ ತೀರ್ಥಕ್ಷೇತ್ರಗಳಾದ ವಾರಣಾಸಿ, ಪ್ರಯಾಗ್ ರಾಜ್, ಗೋರಖ್ ಪುರ ಸಂಪರ್ಕಿಸುವಂತೆ ಹೊಸ ರೈಲು ಮಂಜೂರು ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಸುಬ್ರಹ್ಮಣ್ಯ - ಸಕಲೇಶಪುರ ಹಳಿ ದ್ವಿಪಥ ಕಾಮಗಾರಿ, ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಮಂಗಳೂರು - ಪುತ್ತೂರು- ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಹಾಗೂ ಕಾರವಾರ- ಬೆಂಗಳೂರು ರೈಲಿನ ವೇಳೆಯಲ್ಲಿ ಬದಲಾವಣೆ ಮಾಡುವಂತೆ ಕೋರಲಾಯಿತು.
ಮಂಗಳೂರು- ಕೊಯಂಬತ್ತೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿಗೆ ಗುರುವಾಯೂರಿಗೆ ಪ್ರಯಾಣಿಸುವ ಯಾತ್ರಿಗಳಿಗೆ ಅನುಕೂಲವಾಗುವಂತೆ ಕುಟ್ಟಿಪುರಂ ರೈಲು ನಿಲ್ದಾಣದಲ್ಲಿ ನಿಲುಗಡೆ ಒದಗಿಸುವುದು, ಕೊಯಂಬತ್ತೂರು- ಮಂಗಳೂರು ಜಂಕ್ಷನ್ - ಜಬಲ್ಜುರ್ ಎಕ್ಸ್ ಪ್ರೆಸ್ ವಿಶೇಷ ರೈಲನ್ನು ಖಾಯಂಗೊಳಿಸುವಂತೆ ಸಚಿವರಿಗೆ ಮನವಿ ಮಾಡಿದರು.ಸಂಸದರ ಬೇಡಿಕೆಗಳನ್ನು ಪರಿಶೀಲಿಸಿದ ಸಚಿವರು ಈಡೇರಿಸುವ ಭರವಸೆ ನೀಡಿದ್ದಾರೆ.