ರಾಜ್ಯ

ಐಎಂಎ ವಂಚನೆ ಪ್ರಕರಣ; ಇಡಿ ಸಮನ್ಸ್ ಗೆ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ

Srinivasamurthy VN
ಬೆಂಗಳೂರು: ಹೂಡಿಕೆದಾರರಿಗೆ ಬಹುಕೋಟಿ ವಂಚಿಸಿದ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಮೊದಲ ಬಾರಿಗೆ ಈ ಸಂಬಂಧ ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಕೆಲ ಹಿರಿಯ ಅಧಿಕಾರಿಗಳು ಶುಕ್ರವಾರ ಜಮೀರ್ ಅಹ್ಮದ್ ಖಾನ್ ಅವರ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಜುಲೈ 5ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.  ಆ ಮೂಲಕ ಜಮೀರ್ ಅಹ್ಮದ್ ಖಾನ್ ಇಡೀ ದೇಶದ ಗಮನ ಸೆಳೆದಿದ್ದ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದ ಮೊದಲ ರಾಜಕಾರಣಿಯಾಗಿದ್ದಾರೆ. 
ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಜಮೀರ್ ಅಹ್ಮದ್ ಖಾನ್, ಐಎಂಎ ವಂಚನೆ ಪ್ರಕರಣಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೆ ಮನ್ಸೂರ್ ಖಾನ್ ಅವರೊಂದಿಗೆ ನಾನು ಹೊಂದಿದ್ದ ಆರ್ಥಿಕ ವ್ಯವಹಾರ ಸಂಬಂಧ ಇಡಿ ಆಧಿಕಾರಿಗಳು ಸ್ಪಷ್ಟನೆ ಕೇಳಿದ್ದಾರೆ. ಈ ಸಂಬಂಧ ನಾನು ಸ್ಪಷ್ಟನೆ ನೀಡುತ್ತೇನೆ. ಮನ್ಸೂರ್ ಖಾನ್ ಅವರಿಗೆ ನಾನು ನನ್ನ ಒಂದಷ್ಟು ಆಸ್ತಿ ಮಾರಿದ್ದೆ. ಈ ಸಂಬಂಧ ಎಲ್ಲ ದಾಖಲೆಗಳನ್ನೂ ನಾನು ಹೊಂದಿದ್ದೇನೆ. ಇದೇ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಲಿದ್ದೇನೆ ಎಂದು ಜಮೀರ್ ಹೇಳಿದ್ದಾರೆ.
ಇದೇ ವೇಳೆ ಸಮನ್ಸ್ ಕುರಿತ ಮಾಧ್ಯಮಗಳ ವರದಿ ವಿರುದ್ಧ ಪರೋಕ್ಷ ಕಿಡಿಕಾರಿರುವ ಜಮೀರ್ ಅಹ್ಮದ್ ಖಾನ್, ಅವರು ಇಡಿ ಸಮನ್ಸ್ ನಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ಅವರಿಗೆ ಅನುಮಾನ ಕಾಡಿದೆ. ಅದನ್ನು ನಿವಾರಿಸುವುದು ನಮ್ಮ ಜವಾಬ್ದಾರಿ. ಅಧಿಕಾರಿಗಳ ತನಿಖೆಗೆ ನಾನು ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಎಲ್ಲ ದಾಖಲೆಗಳನ್ನೂ ಅವರಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಪ್ರಕರಣದ ಪ್ರಮುಖ ಕಿಂಗ್ ಪಿನ್ ಐಎಂಎ ಸಂಸ್ಥೆಯ ಮುಖ್ಯಸ್ಥ ಮನ್ಸೂರ್ ಖಾನ್ ದುಬೈನಲ್ಲಿ ತಲೆ ಮರೆಸಿಕೊಂಡಿದ್ದು, ಆತನನ್ನು ಭಾರತಕ್ಕೆ ಕರೆತರಲು ಇಡಿ ಸತತ ಪ್ರಯತ್ನದಲ್ಲಿದೆ. ಈ ಕುರಿತಂತೆ ದುಬೈ ಅಧಿಕಾರಿಗಳೊಂದಿಗೆ ಇಡಿ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಮನ್ಸೂರ್ ಖಾನ್ ಚಲನವನಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.
SCROLL FOR NEXT