ಬೆಳಗಾವಿ: ತಾಯಿಯೊಂದಿಗೆ ಜಗಳವಾಡಿ ಹೆಂಡತಿ ಮನೆ ಬಿಟ್ಟು ಹೋದ ಕಾರಣ ಸಿಟ್ಟಿಗೆದ್ದ ಮಗ ಹೆತ್ತ ತಾಯಿಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿಯ ಹಿಂಡಲಗಾ-ಸುಳಗಾ ಗ್ರಾಮದಲ್ಲಿ ನಡೆದಿದೆ.
ಹಿಂಡಲಗಾ ಸುಳಗಾ ಗ್ರಾಮದ ಪದ್ಮಾವತಿ ಬಲವಂತ ಚೌಗಲೆ ( 55) ಕೊಲೆಯಾದ ಮಹಿಳೆ, ವಿನಯ ಚೌಗಲೆ (30) ಕೊಲೆ ಮಾಡಿದ ಪುತ್ರ. ಎರಡು ಮದುವೆಯಾಗಿದ್ದ ವಿನಯನ ಮೊದಲನೇ ಪತ್ನಿ ಪರಸ್ಪರ ಮನಸ್ತಾಪದಿಂದ ವಿಚ್ಛೇದನ ಪಡೆದಿದ್ದ.
ನಂತರ ವಿನಯ ಎರಡನೇ ಮದುವೆಯಾಗಿದ್ದ. ಆದರೆ, ತಾಯಿ ಪದ್ಮಾವತಿಗೂ ವಿನಯನ ಎರಡನೇ ಹೆಂಡತಿಗೂ ಆಗಾಗ ಜಗಳ ಆಗುತ್ತಿತ್ತು. ಬುಧವಾರ ವಿನಯ ಕೆಲಸಕ್ಕೆ ಮನೆಯಿಂದ ಹೋದ ನಂತರ ಅತ್ತೆ ಸೊಸೆ ನಡುವೆ ಜಗಳ ನಡೆದಿದೆ. ಇದರಿಂದ ಎರಡನೇ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ. ಸಂಜೆ ಮನೆಗೆ ಬಂದು ವಿಷಯ ತಿಳಿದ ವಿನಯ ಆಕ್ರೋಶಗೊಂಡು ತಾಯಿಯೊಂದಿಗೆ ಜಗಳ ಮಾಡಿದ್ದಾನೆ.
ವಾಗ್ವಾದ ವಿಕೋಪಕ್ಕೆ ಹೋದಾಗ ವಿನಯ ತಾಯಿ ಮೇಲೆ ಕುಡಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಪದ್ಮಾವತಿ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಾಕತಿ ಠಾಣೆಯಲ್ಲಿ ದೂರು ದಾಖಲಾಗಿದೆ.