ರಾಜ್ಯ

ಡಿಕೆಶಿ ಏನು ಜೆಡಿಎಸ್‌ ಪಕ್ಷದ ಏಜೆಂಟರೇ?: ಮಂಡ್ಯ ಕೈ ನಾಯಕರ ಆಕ್ರೋಶ

Srinivas Rao BV
ಬೆಂಗಳೂರು: ಪಕ್ಷದ ಹಿರಿಯ ನಾಯಕರ ಗಮನಕ್ಕೆ ತಾರದೇ ಸಚಿವ ಡಿ.ಕೆ. ಶಿವಕುಮಾರ್ ಅವರು ಮಂಡ್ಯ ಕಾಂಗ್ರೆಸ್ ನಾಯಕರ ಸಭೆ ಕರೆದ ಕ್ರಮಕ್ಕೆ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಕೆಂಡಮಂಡಲರಾಗಿದ್ದಾರೆ. 
ಈ ಮಧ್ಯೆ ಡಿ.ಕೆ.ಶಿವಕುಮಾರ್ ಅವರು, ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ? ಅವರು ಜೆಡಿಎಸ್‌ ಏಜೆಂಟರೇ ಎಂದು ಮಂಡ್ಯ ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಿಯ ನಾಯಕರ ಗಮನಕ್ಕೆ ತರದೇ ಏಕಪಕ್ಷೀಯವಾಗಿ ಸಭೆಯನ್ನು ಏಕೆ ಕರೆಯಲಾಗಿದೆ ಎಂದು ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ಅವರುಗಳು ಡಿಕೆಶಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಗೊತ್ತಾಗಿದೆ. ಈ ರೀತಿ ಮಾಡಿದರೆ ಚುನಾವಣೆ ಸಮಯದಲ್ಲಿ ಕಾರ್ಯಕರ್ತರಿಗೆ ಯಾವ ರೀತಿಯ ಸಂದೇಶ ರವಾನೆಯಾಗುತ್ತದೆ ಎಂಬ ಅರಿವು ಇಲ್ಲವೇ, ಇದರಿಂದ ಪಕ್ಷದ ಮೇಲೆ ಉಂಟಾಗಬಹುದಾದ ಪರಿಣಾಮಗಳು ನಿಮಗೆ ಗೊತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 
ಈ ಸಂಬಂಧ ದೂರು ಕೊಡಲು ಬಂದ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಮುಂದೆ ಸಿದ್ದರಾಮಯ್ಯ ಅವರು ತಮ್ಮ ಅಸಮಧಾನವನ್ನು ಬಹಿರಂಗವಾಗಿ ಹೊರಹಾಕಿದ್ದು ಈ ವಿಚಾರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದು ಸರಿಯಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಹೈಕಮಾಂಡ್ ಗಮನಕ್ಕೆ ಈ ವಿಚಾರವನ್ನು ತರುವುದಾಗಿ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ತೆಗೆದುಕೊಂಡ ಕ್ರಮಕ್ಕೆ ಮಂಡ್ಯ ಜಿಲ್ಲೆಯ ಪ್ರಮುಖ ನಾಯಕರಾದ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ರಮೇಶ್ ಬಂಡಿ ಸಿದ್ದೇಗೌಡ, ಚಂದ್ರಶೇಖರ್ ಮೊದಲಾದ ನಾಯಕರು ಗರಂ ಆಗಿದ್ದು ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ಅವರಿಗೆ ಮಾರುದ್ದ ದೂರು ಸಲ್ಲಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್‌ ಪಕ್ಷದ ಏಜೆಂಟರೇ? ಜೆಡಿಎಸ್‌ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸಲಹೆ, ಸೂಚನೆ ಮೇರೆಗೆ ಸಭೆ ಕರೆದಿರುವುದನ್ನು ನೋಡಿದರೆ ಈ ರೀತಿಯ ಅನುಮಾನ ಕಾಡುತ್ತಿದೆ ಎಂದು ಅವರುಗಳು ಕೆಂಡಾಮಂಡಲರಾಗಿದ್ದಾರೆ ಎಂದು ಗೊತ್ತಾಗಿದೆ.
SCROLL FOR NEXT