ರಾಜ್ಯ

ಧಾರವಾಡ ಕಟ್ಟಡ ಕುಸಿತ ಪ್ರಕರಣ: 4 ಆರೋಪಿಗಳು ಪೊಲೀಸರಿಗೆ ಶರಣು

Srinivasamurthy VN
ಧಾರವಾಡ: ಈ ವರೆಗೂ 14 ಮಂದಿಯ ಧಾರುಣ ಸಾವಿಗೆ ಕಾರಣವಾದ ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ನಾಲ್ಕು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಕಟ್ಟಡದ ನಾಲ್ವರು ಪಾಲುದಾರರು ಪೊಲೀಸರ ಎದುರು ಶರಣಾಗಿದ್ದಾರೆ. ಅಂತೆಯೇ ಕಟ್ಟಡ ವಿನ್ಯಾಸ ಮಾಡಿದ ಎಂಜಿನಿಯರ್ ವಿವೇಕ ಪವಾರ್ ಇನ್ನೂ ನಾಪತ್ತೆಯಾಗಿದ್ದಾರೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಂಬಂಧ ಗಂಗಪ್ಪ ಶಿಂಥ್ರೆ, ರವಿ ಸಬಾರದ್, ಬಸವರಾಜ್ ನಿಗಡಿ ಮತ್ತು ರಾಜು ಘಟಿನ್ ಎಂಬುವವರು ಪೊಲೀಸರಿಗೆ ಶರಣಾಗಿದ್ದಾರೆ.
ಶರಣಾಗತಿ ಬಳಿಕ ಮಾತನಾಡಿರುವ ಬಸವರಾಜ್ ನಿಗಡಿ, ನಾವು ಕಟ್ಟಡದ ತಂತ್ರಜ್ಞರಲ್ಲ. ಹೀಗಾಗಿ ಕಟ್ಟಡ ಕುಸಿತ ಸಂಬಂಧ ತಮಗೇನೂ ಗೊತ್ತಿಲ್ಲ. ಈ ಬಗ್ಗೆ ಕಟ್ಟಡ ವಿನ್ಯಾಸ ಮಾಡಿದ ಎಂಜಿನಿಯರ್ ವಿವೇಕ ಪವಾರ್ ಅವರಿಗೆ ತಿಳಿದಿದೆ. ಅವರೇ ನಮಗೆ ಭೂಕಂಪವಾದರೂ ಕಟ್ಟಡ ಅಲುಗಾಡುವುದಿಲ್ಲ ಎಂದು ಹೇಳಿದ್ದರು. ಕಟ್ಟಡಕ್ಕಾಗಿ ನಾವು ಸುಮಾರು 7 ಕೋಟಿ ಹಣ ವ್ಯಯಿಸಿದ್ದೇವೆ. ಇದು ನಮ್ಮ ಸ್ವಂತ ಕಟ್ಟಡವಾಗಿದ್ದು, ಯಾರಾದರೂ ತಮ್ಮ ಸ್ವಂತ ಕಟ್ಟಡಕ್ಕೆ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ದುರಂತ ನಡೆದ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು,  ಎಸ್​ಡಿಆರ್​ಎಫ್​​ ಮತ್ತು 140 ಎನ್​​​ಡಿಆರ್​​ಎಫ್​​ ಸಿಬ್ಬಂದಿ, 250 ಮಂದಿ ಅಗ್ನಿಶಾಮಕ ಸಿಬ್ಬಂದಿ, 3 ಸಾವಿರಕ್ಕೂ ಹೆಚ್ಚು ಪೊಲೀಸರು, 200 ಸ್ವಯಂ ಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. 12 ಜೆಸಿಬಿಗಳಿಂದ ಕಟ್ಟಡ ಅವಶೇಷ ತೆರವು ಕಾರ್ಯ ನಡೆಸಲಾಗುತ್ತಿದೆ. ಬೋಡ್ರಸ್​​ ಡಿಗ್ಗಿಂಗ್​ ವಾಹನಗಳಿಂದ ಭರದ ಕಾರ್ಯಾಚರಣೆ ಸಾಗಿದೆ. 12 ಆ್ಯಂಬುಲೆನ್ಸ್​​​, 50 ಮಂದಿ ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
SCROLL FOR NEXT