ರಾಜ್ಯ

ಧಾರವಾಡ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 15ಕ್ಕೆ ಏರಿಕೆ

Srinivasamurthy VN
ಧಾರವಾಡ: ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಸತತ ನಾಲ್ಕನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಇಲ್ಲಿನ ಕುಮಾರೇಶ‍್ವರ ನಗರದಲ್ಲಿ ನಿರ್ಮಿಸಲಾಗುತ್ತಿದ್ದ ಕಟ್ಟಡ ಮಂಗಳವಾರ ಕುಸಿದು ಬಿದ್ದಿದ್ದು, ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದ್ದು, ಇಂದು ನಾಲ್ವರ ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಮೂಲಕ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾದಂತಾಗಿದೆ.
ಅವಶೇಷಗಳ ತೆರವು ಕಾರ್ಯಾಚರಣೆಯಲ್ಲಿ ತೊಡಗಿರುವ 100ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಇನ್ನುಳಿದವರ ರಕ್ಷಣೆಗಾಗಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಕಟ್ಟಡದ ಪಕ್ಕದಲ್ಲಿದ್ದ ವೆಬ್ ಕೇಂದ್ರಕ್ಕೆ ಭೇಟಿ ನೀಡಿದ್ದ 12 ಜನರಲ್ಲಿ ಹೆಚ್ಚಿನವರು ಹೆಣ್ಣುಮಕ್ಕಳಾಗಿದ್ದು, ಅವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದುವರೆಗೆ 65 ಜನರನ್ನು ರಕ್ಷಿಸಲಾಗಿದ್ದು, ಕಟ್ಟಡದ ಕೆಳಮಹಡಿ ಹಾಗೂ ಮೊದಲ ಮಹಡಿಯಲ್ಲಿ ಸುಮಾರು 60 ಅಂಗಡಿಗಳಿದ್ದವು. ಎರಡನೇ ಹಾಗೂ ಮೂರನೇ ಮಹಡಿಗಳು ನಿರ್ಮಾಣ ಹಂತದಲ್ಲಿದ್ದವು. 
ಸುಮಾರು 72 ಗಂಟೆಗಳ ವರೆಗೆ ಅವಶೇಷಗಳಡಿ ಸಿಲುಕಿದ್ದ 24 ವರ್ಷದ ವ್ಯಕ್ತಿಯನ್ನು ರಕ್ಷಣಾ ಸಿಬ್ಬಂದಿ ಇಂದು ಹೊರ ತೆಗೆದಿದ್ದಾರೆ. 72 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದ ಆತನಿಗೆ ನೀರು ಹಾಗೂ ಕೊಳವೆ ಮೂಲಕ ಆಮ್ಲಜನಕ ಪೂರೈಸಿ ರಕ್ಷಿಸಲಾಗಿದೆ ಎಂದು ಆಗ್ನಿಶಾಮಕ ದಳ ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡ ಕುಸಿದು ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಗುರುವಾರ ಇಂಜಿನಿಯರ್ ವಿನಯ್ ಪವಾರ್ ಅವರನ್ನು ಬಂಧಿಸಿದ್ದರು. ಇನ್ನುಳಿದ ಆರೋಪಿಗಳಾದ ರವಿ ಸಬರದ್, ಬಸವರಾಜ್ ನಿಗದಿ, ಮಹಾಬಳೇಶ್ವರ ಪುರದಗುಡಿ ಹಾಗೂ ಕಟ್ಟಡದ ಮಾಲೀಕ ಗಂಗಣ್ಣ ಶಿಂತ್ರಿ ಅವರು ಪೊಲೀಸರಿಗೆ ಶರಣಾಗಿದ್ದಾರೆ. ಇನ್ನೋರ್ವ ಆರೋಪಿ ರಾಜು ಘಾಟಿ ತಲೆ ಮರೆಸಿಕೊಂಡಿದ್ದಾರೆ.
SCROLL FOR NEXT