ರಾಜ್ಯ

ಧಾರವಾಡ ಕಟ್ಟಡ ಕುಸಿತ ಪ್ರಕರಣ; ರಕ್ಷಣಾ ಕಾರ್ಯಾಚರಣೆ ಅಂತ್ಯ, ಸಾವಿನ ಸಂಖ್ಯೆ 19ಕ್ಕೆ ಏರಿಕೆ

Srinivasamurthy VN
ಧಾರವಾಡ: ಧಾರವಾಡ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ಸತತ ಆರು ದಿನಗಳ ಮ್ಯಾರಥಾನ್ ರಕ್ಷಣಾ ಕಾರ್ಯಾಚರಣೆಗೆ ಕೊನೆಗೂ ಅಂತ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಅತ್ಯಂತ ದೊಡ್ಡ ಕಟ್ಟಡ ದುರಂತ ಇದಾಗಿದ್ದು, ಅಂತೆಯೇ ಸುಧೀರ್ಘವಾಗಿ ನಡೆದ ರಕ್ಷಣಾ ಕಾರ್ಯಾಚರಣೆ ಕೂಡ ಇದಾಗಿದೆ. ಸತತ ಆರು ದಿನಗಳ ಬಳಿಕ ಸೋಮವಾರ ಸಂಜೆ ಅಗ್ನಿಶಾಮಕ ದಳ ಹಾಗೂ ಎನ್ ಡಿಆರ್ ಎಫ್ ದಳಗಳು ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದವು. ಆ ಮೂಲಕ ಆರು ದಿನಗಳ ಮ್ಯಾರಥಾನ್ ಕಾರ್ಯಾಚರಣೆ ಅಂತ್ಯವಾಯಿತು. 
ದುರಂತದಲ್ಲಿ ಒಟ್ಟು 19 ಮಂದಿ ಸಾವನ್ನಪ್ಪಿದ್ದು, 64 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಇನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ, ಹಾಗೂ ವಿಪತ್ತು ನಿರ್ವಹಣಾ ದಳಗಳ ಒಟ್ಟು ಸುಮಾರು 3 ಸಾವಿರ ಮಂದಿ ಪಾಲ್ಗೊಂಡಿದ್ದರು. ಕಾರ್ಯಾಚರಣೆ ವೇಳೆ ಕಟ್ಟಡದಡಿಯಲ್ಲಿ ಸಿಲುಕಿದ್ದ ಎಲ್ಲರನ್ನೂ ಹೊರಗೆ ತೆಗೆದಿದ್ದು ಮಾತ್ರವಲ್ಲದೇ ಅವಶೇಷಗಳಡಿಯಲ್ಲಿ ಸಿಲುಕಿದ್ದ ಲ್ಯಾಪ್ ಟಾಪ್ ಗಳು, ಮೊಬೈಲ್ ಫೋನ್ ಗಳಂತಹ ವಸ್ತುಗಳನ್ನು ಕೂಡ ಹೊರ ತೆಗೆಯಲಾಗಿದೆ.
ಇನ್ನು ದುರಂತಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮಾವ ಸೇರಿದಂತೆ ಕಟ್ಟಡದ ಎಲ್ಲ ಐದೂ ಮಂದಿ ಮಾಲೀಕರನ್ನು ಬಂಧಿಸಲಾಗಿದೆ. ಅಂತೆಯೇ ದುರಂತಕ್ಕೆ ಕಟ್ಡದ ಅವೈಜ್ಞಾನಿಕ ವಿನ್ಯಾಸವೇ ಕಾರಣ ಎಂದು ಹೇಳಲಾಗಿದೆ. ಕಟ್ಟಡದ ಎಂಜಿನಿಯರ್ ಕಟ್ಟಡದ ಬಲಿಷ್ಟತೆಗಾಗಿ ಹೆಚ್ಚುವರಿ ಪಿಲ್ಲರ್ ಗಳನ್ನು ಅಳವಡಿಸುಲ ಮುಂದಾದಾಗ ಈ ದುರಂತ ಸಂಭವಿಸಿತ್ತು ಎಂದು ಹೇಳಲಾಗಿದೆ. ಪ್ರಕರಣ ಸಂಬಂಧ ಸರ್ಕಾರ 7ಎಚ್ ಡಿಎಂಸಿ ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಅಂತೆಯೇ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿತ್ತು.
ದುರಂತ ನಡೆದ 2ನೇ ದಿನದ ಹೊತ್ತಿಗೆ 54 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಸಂಗಮೇಶ್ ಎಂಬ ಯುವಕ ಬರೊಬ್ಬರಿ 3 ದಿನಗಳ ಅನ್ನ ನೀರು ಇಲ್ಲದೇ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಬದುಕಿ ಬಂದಿದ್ದ. ಅಂತೆಯೇ ಪ್ರೇಮ ಎಂಬ 40 ವರ್ಷ ವಯಸ್ಸಿನ ಮಹಿಳೆ ಅದೃಷ್ಟವಶಾತ್ ಬದುಕಿದ್ದರಾದರೂ, ಅವರ 8 ವರ್ಷದ ಮಗಳ ಅವರ ಕಣ್ಣಮುಂದೆಯೇ ಸಾವನ್ನಪ್ಪಿದ್ದಳು.
SCROLL FOR NEXT