ರಾಜ್ಯ

ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅಮಾನತು ಆದೇಶ ಎತ್ತಿಹಿಡಿದ ಹೈಕೋರ್ಟ್

Lingaraj Badiger
ಬೆಂಗಳೂರು: ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ತಮ್ಮನ್ನು ಅಮಾನತುಗೊಳಿಸಿದ ವಿಧಾನಸಭೆ ವಿಶೇಷ ಮಂಡಳಿಯ ಆದೇಶ ಪ್ರಶ್ನಿಸಿ ಎಸ್‍. ಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. 
ಅಮಾನತು ಆದೇಶ ರದ್ದು ಕೋರಿ ಮೂರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ಎಸ್. ಸುನೀಲ್‍ ದತ್ ಅವರಿದ್ದ ಏಕಸದಸ್ಯ ಪೀಠ ತೀರ್ಪು ಇಂದು ಪ್ರಕಟಿಸಿದ್ದು, ಎಸ್.ಮೂರ್ತಿ ಅಮಾನತು ಆದೇಶ ಎತ್ತಿಹಿಡಿದಿದೆ.
ವಿಧಾನಸಭೆ ಕಾರ್ಯದರ್ಶಿಯಾಗಿದ್ದ ಎಸ್. ಮೂರ್ತಿಯವರನ್ನು ಸೇವೆಯಿಂದ ಅಮಾನತುಗೊಳಿಸಿ ವಿಧಾನಸಭೆ ಅಧೀನ ಕಾರ್ಯದರ್ಶಿ 2018ರ ಡಿಸೆಂಬರ್‌ 27ರಂದು ಆದೇಶ ಹೊರಡಿಸಿದ್ದರು.
2016 ಹಾಗೂ 2017ನೇ ಸಾಲಿನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ಕಾಮಗಾರಿ ಹಾಗೂ ಇತರೆ ಖರ್ಚು ವೆಚ್ಚಗಳಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಧ್ಯಕ್ಷತೆಯ ಶಾಸಕಾಂಗದ ವಿಶೇಷ ಮಂಡಳಿಯ ಆದೇಶದ ಅನುಸಾರ ಎಸ್.ಮೂರ್ತಿಯವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೂರ್ತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.
SCROLL FOR NEXT