ರಾಜ್ಯ

ನಮಗೆ ಗಾಸಿಪ್, ಜಗಳ ಬೇಡ; ಟೀ ಸ್ಟಾಲ್, ಲಿಕ್ಕರ್ ಶಾಪ್ ಕೂಡ ಬೇಡ; ರಾಮನಗರ ಜಿಲ್ಲೆಯಲ್ಲೊಂದು ಅಪರೂಪದ ಗ್ರಾಮ!

Sumana Upadhyaya
ಬೆಂಗಳೂರು: ಇಲ್ಲೊಂದು ಗ್ರಾಮವಿದೆ, ಆ ಇಡೀ ಗ್ರಾಮದಲ್ಲಿ ನಿಮಗೆ ಹುಡುಕಿದರೂ ಒಂದೇ ಒಂದು ಟೀ ಸ್ಟಾಲ್ ಆಗಲಿ, ಲಿಕ್ಕರ್ ಶಾಪ್ ಆಗಲಿ ಸಿಗುವುದಿಲ್ಲ.
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ವೆಂಕಟರಾಯನದೊಡ್ಡಿ ಗ್ರಾಮದಲ್ಲಿ ಸುಮಾರು 2,700 ಜನಸಂಖ್ಯೆಯಿದೆ. ಇಲ್ಲಿ ಟೀ ಸ್ಟಾಲ್, ಲಿಕ್ಕರ್ ಶಾಪ್ ನಿಷೇಧಿಸಲು ಪ್ರಮುಖ ಕಾರಣವಿದೆ. ಟೀ ಸ್ಟಾಲ್ ಗಳಿದ್ದರೆ ಅಲ್ಲಿ ಯುವಕರು ಸೇರುತ್ತಾರೆ, ಸಿಗರೇಟು ಸೇದುತ್ತಾ ಟೀ ಕುಡಿಯುತ್ತಾ ಗಾಸಿಪ್ ಮಾತನಾಡುತ್ತಾರೆ. ಲಿಕ್ಕರ್ ಶಾಪ್ ಗಳಲ್ಲಿ ಕೇಳುವುದೇ ಬೇಡ. ಚೆನ್ನಾಗಿ ಕುಡಿದು ಹೊಡೆದಾಡಿಕೊಂಡು ಸಾಯುವವರೂ ಇದ್ದಾರೆ. ನಂತರ ನೂರಾರು ಸಮಸ್ಯೆಗಳು, ಅಕ್ರಮಗಳು ಹುಟ್ಟಿಕೊಳ್ಳುತ್ತವೆ.
ಇದ್ಯಾವುದೂ ಬೇಡ, ನಾವೀಗ ನೆಮ್ಮದಿಯಿಂದ ಚೆನ್ನಾಗಿ ಇದ್ದೇವೆ. ಹೀಗಾಗಿ ಗ್ರಾಮದಲ್ಲಿ ಒಂದೇ ಒಂದು ಟೀ ಸ್ಟಾಲ್ ಆಗಲಿ, ಮದ್ಯದಂಗಡಿಯಾಗಲಿ ತಲೆಯೆತ್ತದಂತೆ ನೋಡಿಕೊಂಡಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.
ಈ ಗ್ರಾಮದ ವಯೋವೃದ್ಧರಾದ ವೆಂಕಟೇಶು ಮತ್ತು ಶಿವರಾಮು ಎಂಬ ಸ್ನೇಹಿತರು ಈ ಬಗ್ಗೆ ಹೀಗೆ ಹೇಳುತ್ತಾರೆ; ಇಲ್ಲಿ ದಶಕಗಳ ಹಿಂದಿನಿಂದಲೇ ಟೀ ಸ್ಟಾಲ್ ಆಗಲಿ, ಮದ್ಯದಂಗಡಿಯಾಗಲಿ ಇಲ್ಲ, ಇದರಿಂದಾಗಿ ನಮ್ಮ ಗ್ರಾಮದಲ್ಲಿ ಗಾಸಿಪ್ ಮಾತನಾಡುವುದು, ಜಗಳಗಳಾಗುವುದು, ದುಷ್ಟಟಗಳನ್ನು ಹೊಂದಿರುವವರು ಇಲ್ಲ, ಮಹಿಳೆಯರಿಗೆ ತುಂಬಾ ಗೌರವವನ್ನು ಕೊಡುತ್ತೇವೆ. ಅದು ವಯೋವೃದ್ಧರಿಂದ ಹಿಡಿದು ಪುಟ್ಟ ಮಕ್ಕಳವರೆಗೂ ಈ ನಿಯಮ ಅನ್ವಯವಾಗುತ್ತದೆ ಮತ್ತು ಎಲ್ಲರೂ ಖುಷಿಯಿಂದ ಇದ್ದಾರೆ. ಏನೇ ಸಣ್ಣಪುಟ್ಟ ಭಿನ್ನಾಭಿಪ್ರಾಯ, ಜಗಳಗಳು ಬಂದರೂ ಕೂಡ ನಮ್ಮನಮ್ಮಲ್ಲೇ ಬಗೆಹರಿಸಿಕೊಳ್ಳುತ್ತೇವೆ, ಪೊಲೀಸ್ ಠಾಣೆಯವರೆಗೆ ಹೋಗುವುದಿಲ್ಲ ಎನ್ನುತ್ತಾರೆ. ಕನಕಪುರ ಪೊಲೀಸ್ ಠಾಣೆಯ ಪೊಲೀಸರನ್ನು ಕೇಳಿದರೆ ಅವರು ಕೂಡ ಹೌದೆನ್ನುತ್ತಾರೆ.
ಕಳೆದ 6 ದಶಕಗಳಿಂದ ಗ್ರಾಮದಲ್ಲಿ ಈ ನಿಯಮ ರೂಢಿಯಲ್ಲಿದೆ. ಈ ಗ್ರಾಮದ ರಸ್ತೆ ಖ್ಯಾತ ಕಬಾಲಮ್ಮ ಬೆಟ್ಟಕ್ಕೆ ಸಂಪರ್ಕಿಸುತ್ತಿದ್ದು ಇಲ್ಲಿ ಪ್ರತಿನಿತ್ಯ ಪ್ರವಾಸಿಗರು ವಾಹನದಲ್ಲಿ ಹೋಗುತ್ತಾರೆ. ಹಾಗೆ ಹೋಗುವವರು ನಮಗೆ ದಾರಿ ಮಧ್ಯದಲ್ಲಿ ಟೀ ಕುಡಿಯಲು ಟೀ ಅಂಗಡಿ ಬೇಕೆಂದು ಕೇಳುತ್ತಾರೆ. ಆದರೆ ನಾವು ಟೀ ಸ್ಟಾಲ್ ಬೇಡವೇ ಬೇಡ ಎಂದು ನಿರ್ಧರಿಸಿದ್ದೇವೆ. ಈ ಗ್ರಾಮಕ್ಕೆ ಬಂದು ಯಾರಾದರೂ ಅನಗತ್ಯ ಕಿರಿಕಿರಿ ಶುರುಮಾಡಿದರೆ ನಮ್ಮ ನಾಯಕ ರಾಮಪ್ಪನ ಬಳಿಗೆ ಕರೆದುಕೊಂಡು ಹೋಗುತ್ತೇವೆ, ಅವರು ಬಗೆಹರಿಸುತ್ತಾರೆ ಎಂದರು ಶಿವರಾಮು.
ಸ್ವಾತಂತ್ರ್ಯಕ್ಕೆ ಮುನ್ನ ರಾಮನಗರದ ಈ ಗ್ರಾಮದಲ್ಲಿ ಕೆಲವು ಲಿಕ್ಕರ್ ಶಾಪ್ ಮತ್ತು ಟೀ ಸ್ಟಾಲ್ ಗಳಿದ್ದವಂತೆ. ಒಂದು ಬಾರಿ ಎರಡು ಗುಂಪಿನ ನಡುವೆ ಜಗಳವಾಗಿ ಅದು ಕೊಲೆಯ ಹಂತಕ್ಕೆ ತಲುಪಿತು. ನಂತರ ಗ್ರಾಮದ ಹಿರಿಯರು ಈ ನಿರ್ಧಾರ ತೆಗೆದುಕೊಂಡರು. ನಮ್ಮ ಮಕ್ಕಳು, ಮೊಮ್ಮಕ್ಕಳು ಕೂಡ ಅದನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂದರು ಹಿರಿಯರು.
SCROLL FOR NEXT