ರಾಜ್ಯ

ಹೃದಯಾಘಾತದಿಂದ ತಂದೆ ಸಾವು, ಸ್ಟೇರಿಂಗ್ ಹಿಡಿದು ಸುರಕ್ಷಿತವಾಗಿ ವಾಹನ ನಿಲ್ಲಿಸಿದ ಬಾಲಕ

Nagaraja AB

ತುಮಕೂರು: ಸರಕು ಸಾಗಿಸುವ ಟಾಟಾ ಏಸ್ ವಾಹನ ಚಾಲಕ ಶಿವಕುಮಾರ್ (35) ಎಂಬುವರು ವಾಹನ ಚಾಲನೆ ಮಾಡುತ್ತಿರುವಾಗಲೇ ಮೇ ದಿನದಂದೇ  ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶಿವಕುಮಾರ್ 97 ಕಿಲೋ ಮೀಟರ್ ದೂರ ವಾಹನ ಚಾಲನೆ ಮಾಡಿದ ನಂತರ ಹೃದಯಾಘಾತವಾಗಿದ್ದು,ಪ್ರಜ್ಞೆ ಕಳೆದುಕೊಂಡಿದ್ದಾರೆ. ಈ ವೇಳೆ ಸೀಟಿಯಲ್ಲಿನಲ್ಲಿಯೇ ಕುಳಿತಿದ್ದ ಅವರ ಪುತ್ರ  ಪುನೀತ್  ತಕ್ಷಣ ಸಮಯ ಪ್ರಜ್ಞೆ ಮೆರೆದಿದ್ದು, ವಾಹನದ ಸ್ಟೇರಿಂಗ್ ಹಿಡಿದು ರಸ್ತೆ ಪಕ್ಕದ ದಿಣ್ಣೆಯ ಕಡೆಗೆ ತಿರುಗಿಸಿದಾಗ ವಾಹನ ನಿಂತಿದೆ.

ಕೊರಟಗೆರೆ ತಾಲೂಕಿನ ಅಳ್ಳಾಲ ಸಂದ್ರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪುನೀತ್ ತನ್ನ ತಂದೆ ಜೊತೆ  ವಾಹನದಲ್ಲಿ ಸುತ್ತುವ ಮೂಲಕ ಬೇಸಿಗೆ ರಜೆ ಅನುಭವಿಸುತ್ತಿದ್ದ. ಆತನ ತಮ್ಮ ನರಸಿಂಹರಾಜು ಅದೇ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಶಿವಕುಮಾರ್ ಪತ್ನಿ ಮುನಿರತ್ನಮ್ಮ ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿವಕುಮಾರ್ ಮೃತದೇಹ ಬುಧವಾರ ಸಂಜೆ ದೇವರಾಯದುರ್ಗದಿಂದ ಬಂದಿದ್ದಾಗಿ ಮೃತರ   ಅತ್ತೆ ಸುಂದರಮ್ಮ ತಿಳಿಸಿದ್ದಾರೆ.

ಯಾವಾಗಲೂ ಕೆಲಸದ ಕಡೆಗೆ ಗಮನ ನೀಡುತ್ತಿದ್ದ ಶಿವಕುಮಾರ್ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು . ದುರಾದೃಷ್ಟವಶಾತ್ ಚಿಕ್ಕವಯಸ್ಸಿನಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪಕ್ಕದ ಮನೆಯ ತೇಜ್ ರಾಜ್ ಹೇಳಿದ್ದಾರೆ

ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿರುವ ಹುಳಿಯಾರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಲಕ್ಷ್ಮೀಕಾಂತ್, ಶಿವಕುಮಾರ್ ಪುತ್ರನ ಸಮಯ ಪ್ರಜ್ಞೆಯನ್ನು ಕೊಂಡಾಡಿದ್ದಾರೆ.

SCROLL FOR NEXT