ಉಡುಪಿ: ಸುವರ್ಣ ತ್ರಿಭುಜ ಮೀನುಗಾರಿಕೆ ಬೋಟ್ ನಿಗೂಢ ನಾಪತ್ತೆ ಪ್ರಕರಣ ನಾಲ್ಕೂವರೆ ತಿಂಗಳ ಬಳಿಕ ಬಹಿರಂಗವಾಗಿದೆ. ಬೋಟ್ ಅವಶೇಷಗಳು ಮಹಾರಾಷ್ಟ್ರ ರಾಜ್ಯದ ಮಾಲ್ವಾಣ್ದಲ್ಲಿ ಮುಳುಗಿರುವುದು ಖಚಿತವಾಗಿದೆ.
ಆದರೆ ದೋಣಿಯಲ್ಲಿದ್ದ ಏಳು ಮೀನುಗಾರರ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಾಲ್ವಾಣ್ ಕಡಲ ತೀರದಿಂದ 33 ಕಿ.ಮೀ ದೂರ ಕಡಲಿನಲ್ಲಿ ಸುವರ್ಣ ತ್ರಿಭುಜ ಬೋಟ್ನ ಅವಶೇಷಗಳು ಪತ್ತೆಯಾಗಿವೆ ಎಂದು ಭಾರತೀಯ ನೌಕಾಸೇನೆ ಮೂಲಗಳು ತಿಳಿಸಿವೆ.
ಮಲ್ಪೆಯ ತಾಂಡೇಲರ ಸಂಘದ ಸದಸ್ಯರ ಜತೆಗೆ ‘ಐಎನ್ಎಸ್ ನಿರೀಕ್ಷಕ’ ನೌಕೆಯು ಮೀನುಗಾರಿಕೆ ಬೋಟ್ ಪತ್ತೆ ಕಾರ್ಯದಲ್ಲಿ ಏ.28ರಿಂದ ತೊಡಗಿಕೊಂಡಿತ್ತು. ಸೋನಾರ್ ತಂತ್ರಜ್ಞಾನದ ಮೂಲಕ ಬೋಟ್ ಇರುವುದನ್ನು ಗುರುತಿಸಿದ ಮುಳುಗು ತಜ್ಞರು, ಸಮುದ್ರದಲ್ಲಿ ಇಳಿದು 60 ಮೀಟರ್ ಆಳದಲ್ಲಿ ಬೋಟ್ ಅವಶೇಷಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಭಾರತೀಯ ನೌಕಾಸೇನೆ ಗುರುವಾರ ಟ್ವೀಟ್ ಮಾಡಿದೆ.
ಮಲ್ಪೆ ಬಂದರಿನಿಂದ ಡಿ. 13ರಂದು ಬೋಟ್ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು. 15ರ ರಾತ್ರಿ ಇತರ ಬೋಟ್ಗಳ ಜೊತೆ ಸಂಪರ್ಕ ಕಳೆದುಕೊಂಡಿತ್ತು. ಏಳು ಮೀನುಗಾರರೊಂದಿಗೆ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳನ್ನು ಐಎನ್ಎಸ್ ನಿರೀಕ್ಷಕ ಹಡಗಿನ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಪತ್ತೆ ಹಚ್ಚಿದ್ದಾರೆ ಎಂದು ನೌಕಾಪಡೆಯ ವಕ್ತಾರ ಟ್ವೀಟ್ ಮಾಡಿದ್ದಾರೆ.
ಕಳೆದ ಡಿಸೆಂಬರ್ 13ರಂದು ಮಲ್ಪೆಯ ಬಂದರ್‌ನಿಂದ ಮೀನುಗಾರಿಕೆಗೆ ತೆರಳಿದ್ದ ಈ ಬೋಟ್‌ನಲ್ಲಿ ಮಲ್ಪೆಯ ಇಬ್ಬರು ಮತ್ತು ಉತ್ತರ ಕನ್ನಡ ಜಿಲ್ಲೆಯ ಐವರು ಮೀನುಗಾರರಿದ್ದರು. ಸಮುದ್ರದ ಸುಮಾರು 60-70 ಮೀಟರ್ ಆಳದಲ್ಲಿ ಬೋಟ್ ನ ಅವಶೇಷಗಳನ್ನು ನೌಕಪಡೆಯ ಹೆಲಿಕಾಪ್ಟರ್‌ಗಳು, ಹಡಗುಗಳು ನಿರಂತರ ಶೋಧ ನಡೆಸಿ ಪತ್ತೆ ಹಚ್ಚಿವೆ ಎಂದು ನೌಕಾಪಡೆ ತಿಳಿಸಿದೆ.
ಐಎನ್ಎಸ್ ನಿರೀಕ್ಷಕ್ ಮೇ 1ರಂದು ಕಾರ್ಯಾಚರಣೆಗಿಳಿದ ವೇಳೆ ಈ ಅವಶೇಷಗಳು ಪತ್ತೆಯಾಗಿವೆ. ಸುವರ್ಣ ತ್ರಿಭುಜ ಎಂಬ ಹೆಸರಿನ ಬೋಟ್ ಮೂಲಕ ಡಿ.13 ರಂದು ರಾತ್ರಿ 11 ಗಂಟೆಗೆ 7 ಮಂದಿ ಮೀನುಗಾರರು ಮಲ್ಪೆ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು.
ಮಲ್ಪೆಯಿಂದ ನಾಪತ್ತೆಯಾಗಿದ್ದ ಸುರ್ವರ್ಣ ತ್ರಿಭುಜ ಮೀನುಗಾರಿಕಾ ದೋಣಿಯನ್ನು ಪತ್ತೆ ಹಚ್ಚಿದ ಕೇಂದ್ರ ನೌಕಾ ಪಡೆಗೆ ಸಂಸದೆ ಶೋಭಾ ಕರಂದ್ಲಾಜೆ ಅಭಿನದನೆ ಸಲ್ಲಿಸಿದ್ದಾರೆ. ಮೀನುಗಾರರಿಗೆ ಈ ಜಂಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವರಿಗೆ ವಿಶೇಷ ಅಭಿನಂದನೆ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos