ರಾಜ್ಯ

ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಇಬ್ಬರು ಬಿಎಂಟಿಸಿ ಸಿಬ್ಬಂದಿ ಸೇರಿ ಮೂವರ ಬಂಧನ

Lingaraj Badiger
ಬೆಂಗಳೂರು: ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಬಿಎಂಟಿಸಿ ಸಿಬ್ಬಂದಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಯಲ್ಲೇ 2000 ಹಾಗೂ 500 ರೂಪಾಯಿ ಮುಖ ಬೆಲೆಯ ಖೋಟಾ ನೋಟು ತಯಾರಿಸುತ್ತಿದ್ದ ಮೂವರನ್ನ ಯಲಹಂಕ ಠಾಣಾ ಪೋಲಿಸರು ಬಂಧಿಸಿದ್ದಾರೆ.
ಏಪ್ರಿಲ್ 26ರಂದು ನಗರದ ಯಲಹಂಕದ ಕೋಗಿಲು ಕ್ರಾಸ್ ಬಳಿ ಐವತ್ತು ಲಕ್ಷ ರೂ ಖೋಟಾ ನೋಟು ಇರಿಸಿಕೊಂಡು ಚಲಾವಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಎಂ.ಬಿ.ರಾಮಕೃಷ್ಣರೆಡ್ಡಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ರಾಯಚೂರಿನ ಬಿಎಂಟಿಸಿಯ ಚಾಲಕ ಕಮ್ ಕಂಡಕ್ಟರ್ ಸೋಮನಗೌಡ (38) ಹಾಸನ ಜಿಲ್ಲೆಯ ಪೋಟೋಗ್ರಾಫರ್ ಕಿರಣ್ ಕುಮಾರ್ (24) ಹಾಗೂ ಚನ್ನರಾಯಪಟ್ಟಣ ತಾಲೂಕಿನ ಬಿಎಂಟಿಸಿ ಚಾಲಕ ನಂಜೇಗೌಡ (32) ಎಂಬ ಮೂವರನ್ನು ಬಂಧಿಸಲಾಗಿದೆ.
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 81,30,000 ಲಕ್ಷ ರೂಪಾಯಿ ಮೌಲ್ಯದ ಖೋಟಾ ನೋಟು ಹಾಗೂ ಖೋಟಾ ನೋಟು ತಯಾರಿಸಲು ಬಳಸುತ್ತಿದ್ದ ಕಂಪ್ಯೂಟರ್ ಮತ್ತು ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.   
ಈಶಾನ್ಯ ವಿಭಾಗದ ಉಪ-ಪೊಲೀಸ್ ಕಮೀಷನರ್ ಕಲಾಕೃಷ್ಣಸ್ವಾಮಿ, ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀನಿವಾಸ್ ಎಂ.ಎಸ್ ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿತ್ತು. 
ಆರೋಪಿಗಳು ನಗರದ ಗಾರ್ವೆಬಾವಿಪಾಳ್ಯದಲ್ಲಿ ಒಂದು ಬಾಡಿಗೆ ಮನೆ ಮಾಡಿ, ಪ್ರಿಂಟರ್, ಫೋಟೊ ಕಟ್ಟರ್, ಬಳಸಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದರು ಎನ್ನಲಾಗಿದೆ.
SCROLL FOR NEXT