ಹಾಸನ:ಈ ವರ್ಷ ಹೇಮಾವತಿ ಜಲಾಶಯದಲ್ಲಿ ನೀರು ಕಡಿಮೆಯಾಗಿರುವುದರಿಂದ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಬರ ಉಂಟಾಗಬಹುದು ಎಂಬ ಆತಂಕ ಎದುರಾಗಿದೆ.
ಸದ್ಯ ಹೇಮಾವತಿ ಜಲಾಶಯದಲ್ಲಿ 5.65 ಟಿಎಂಸಿ ನೀರು ಇದ್ದು, ಅತಿ ಕಡಿಮೆ ಮಟ್ಟಕ್ಕಿಂತ ಕೆಳಗೆ 2 ಟಿಎಂಸಿ ನೀರು ಬಳಸಲಾಗದೆ ಹಾಗೆಯೇ ಇದೆ. ಜಲಾಶಯದ ನೀರಿನ ಸಂಗ್ರಹದ ಗರಿಷ್ಠ ಸಾಮರ್ಥ್ಯ 37.103 ಟಿಎಂಸಿ.
ಹಾಸನ, ತುಮಕೂರು, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 6.66 ಲಕ್ಷ ಎಕರೆ ಪ್ರದೇಶಕ್ಕೆ ಹೇಮಾವತಿ ಜಲಾಶಯದಿಂದ ನೀರು ಪೂರೈಕೆಯಾಗುತ್ತದೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಹೇಮಾವತಿ ಜಲಾಶಯದಲ್ಲಿ 1987, 2003 ಮತ್ತು 2005ರಲ್ಲಿ ನೀರು ಕಡಿಮೆ ಮಟ್ಟಕ್ಕಿಂತ ಕೆಳಗೆ ನೀರು ತಗ್ಗಿ ಹೋಗಿತ್ತು, ಗಂಭೀರ ಹಂತಕ್ಕೆ ಜಲಾಶಯದ ನೀರಿನ ಮಟ್ಟ 2001, 2002, 2004, 2016 ಮತ್ತು 2017ರಲ್ಲಿ ತಗ್ಗಿ ಹೋಗಿತ್ತು. ಜಲಾನಯನ ಪ್ರದೇಶಗಳಲ್ಲಿ ತುಂತುರು ಮಳೆಯಿಂದಾಗಿ ಈ ಪರಿಸ್ಥಿತಿಯುಂಟಾಗಿತ್ತು.
ಜಲಾಶಯಕ್ಕೆ ಈ ವರ್ಷ ಒಳಹರಿವು 1.5 ಟಿಎಂಸಿಯಷ್ಟಾಗಿದ್ದು ಹಾಸನ ನಗರಕ್ಕೆ 2.75 ಟಿಎಂಸಿ ಕುಡಿಯುವ ನೀರಿನ ಅಗತ್ಯವಿದೆ. ಇದನ್ನು ಹೊರತುಪಡಿಸಿ ಹೇಮಾವತಿ ನೀರನ್ನು ಜಿಲ್ಲೆಯ 1.50 ಎಕರೆ ಪ್ರದೇಶದ ಭತ್ತ ಮತ್ತು ಕಬ್ಬಿನ ಬೆಳೆಗೆ ಹಾಯಿಸಲಾಗುತ್ತದೆ. ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು ಮತ್ತು ಸಕಲೇಶಪುರ ಭಾಗಗಳ ಕೆಲವು ತಾಲ್ಲೂಕುಗಳಿಗೆ ಜಿಲ್ಲಾಡಳಿತ ಕುಡಿಯುವ ನೀರನ್ನು ನೀರಿನ ಟ್ಯಾಂಕರ್ ಮೂಲಕ ಪೂರೈಸುತ್ತದೆ.
ಜಲಾಶಯಕ್ಕೆ ನಿನ್ನೆ 300 ಕ್ಯೂಸೆಕ್ಸ್ ನೀರು ಒಳ ಹರಿದು ಬಂದಿದ್ದು 120 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದೆ. ಗೊರೂರು ಅಣೆಕಟ್ಟು ವಿಭಾಗದ ಎಂಜಿನಿಯರ್ ಗಳು ಎಡ, ಬಲ ಮತ್ತು ಮೇಲಿನ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ಏತ ನೀರಾವರಿ ವ್ಯವಸ್ಥೆ ನೀರಿನ ಬರಗಾಲದಿಂದ ನಿಲ್ಲಿಸಲಾಗಿದೆ. ಇದರಿಂದ ರೈತರಲ್ಲಿ ಆತಂಕ ಮನೆಮಾಡಿದೆ.