ರಾಜ್ಯ

ಬೆಂಗಳೂರು: ದಾಸರಹಳ್ಳಿ ಮೆಟ್ರೋ ನಿಲ್ದಾಣದಿಂದ ಜಿಗಿದ ಯುವಕ

Lingaraj Badiger
ಬೆಂಗಳೂರು: ಪೀಣ್ಯ ಸಮೀಪದ ದಾಸರಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಮಂಗಳವಾರ 15 ನಿಮಿಷಗಳ ಕಾಲ ಹೈಡ್ರಾಮವೇ ನಡೆಯಿತು. 
ಕುಡಿದ ಅಮಲಿನಲ್ಲಿದ್ದ ಪ್ರಯಾಣಿಕನೊಬ್ಬ ದಾಸರಹಳ್ಳಿ ಮೆಟ್ರೋ ನಿಲ್ದಾಣದ ಮೊದಲ ಮಹಡಿಯ ಶೌಚಾಲಯದ ಕಿಟಕಿಯಿಂದ ಕೆಳಗೆ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದಾನೆ. 
ಮೆಟ್ರೋ ಮೇಲಿಂದ ಜಿಗಿದ ಯುವಕನನ್ನು ಚಿಕ್ಕಬಾಣಾವರ ನಿವಾಸಿ, ಕೇರಳ ಮೂಲದ ಸಂದೀಪ್‌(23) ಎಂದು ಗುರುತಿಸಲಾಗಿದ್ದು, ಉದ್ಯೋಗ ಮಾಡದೆ ಮಾದಕವಸ್ತು ಮತ್ತು
ಮದ್ಯಪಾನಕ್ಕೆ ದಾಸನಾಗಿದ್ದ ಎನ್ನಲಾಗಿದೆ.
ಮಧ್ಯಾಹ್ನ 3.30ರ ಸುಮಾರಿಗೆ ದಾಸರಹಳ್ಳಿ ನಿಲ್ದಾಣಕ್ಕೆ ಆಗಮಿಸಿದ ಸಂದೀಪ್, ಶೌಚಾಲಕ್ಕೆ ತೆರಳಿದ್ದಾನೆ. ಶೌಚಾಲಯದಿಂದ ಹೊರ ಬಂದ ನಂತರ ಅನುಮಾನಾಸ್ಪದವಾಗಿ ವರ್ತಿಸಿದ ಸಂದೀಪ್ ನನ್ನನ್ನು ಭದ್ರತಾ ಸಿಬ್ಬಂದಿ ಪ್ರಶ್ನಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಜೊತೆ ಜಗಳ ಮಾಡಿಕೊಂಡೇ ಕೆಳಗೆ ಜಿಗಿದಿದ್ದಾನೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ನೆಲದಿಂದ ಸುಮಾರು 25 ಅಡಿ ಎತ್ತರ ಇರುವ ಕನ್‌ಕರ್ಸ್‌ ಲೆವಲ್‌ನಿಂದ ಜಿಗಿದ ಪರಿಣಾಮ ಆತನ ಕಾಲು, ತಲೆ ಮತ್ತು ಕೈ ಸೇರಿದಂತೆ ದೇಹದ ವಿವಿಧೆಡೆ ಗಂಭೀರ ಗಾಯಗಳಾಗಿವೆ ಎಂದು ಬಾಗಲಗುಂಟೆ ಪೊಲೀಸರು ತಿಳಿಸಿದ್ದಾರೆ.
''ಘಟನೆಯ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ ಆತನನ್ನ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಮದ್ಯದ ಅಮಲಿನಲ್ಲಿದ್ದ. ಅಲ್ಲದೇ, ಆತನ ಜೇಬಿನಿಂದ ವೈಟ್‌ನರ್‌ ವಾಸನೆ ಬರುತ್ತಿತ್ತು'' ಎಂದು ಪೊಲೀಸ್‌ ಹೇಳಿದ್ದಾರೆ.
SCROLL FOR NEXT