ರಾಜ್ಯ

ಕೆ.ಆರ್‌.ಮಾರುಕಟ್ಟೆಯಲ್ಲಿ ಜಾಗದ ವಿವಾದ: ನಿಂಬೆಹಣ್ಣು ವ್ಯಾಪಾರಿಯ ಬರ್ಬರ ಹತ್ಯೆ

Srinivasamurthy VN
ಬೆಂಗಳೂರು: ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದ, ಸಿಟಿ ಮಾರುಕಟ್ಟೆ(ಕೃಷ್ಣ ರಾಜೇಂದ್ರ ಮಾರುಕಟ್ಟೆ) ಕಾಂಪ್ಲೆಕ್ಸ್ ಬಳಿ ವ್ಯಾಪಾರ ನಡೆಸುವ ಜಾಗಕ್ಕಾಗಿ ನಡೆದ ಜಗಳದಲ್ಲಿ ನಿಂಬೆಹಣ್ಣು ವ್ಯಾಪಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಹಳೆಗುಡ್ಡದ ಹಳ್ಳಿಯ ನಿವಾಸಿ ಭರತ್ (32) ಕೊಲೆಯಾದ ವ್ಯಾಪಾರಿ. ತರಕಾರಿ ವ್ಯಾಪಾರಿ ಶರವಣ ಹಾಗೂ ಆತನ ನಾಲ್ಕೈದು ಮಂದಿ ಸಹಚರರು ಈ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭರತ್, ಸಿಟಿ ಮಾರುಕಟ್ಟೆಯ ಕಾಂಪ್ಲೆಕ್ಸ್ ಬಳಿ ನಿಂಬೆಹಣ್ಣು ವ್ಯಾಪಾರ ಮಾಡುತ್ತಿದ್ದರೆ, ಶರವಣ ನಿಂಬೆಹಣ್ಣಿನ ಜತೆಗೆ ತರಕಾರಿ ವ್ಯಾಪಾರ ಕೂಡ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಕಳೆದ ಒಂದು ತಿಂಗಳ ಹಿಂದೆ ಇವರಿಬ್ಬರ ನಡುವೆ ವ್ಯಾಪಾರ ನಡೆಸುವ ಜಾಗದ ವಿಚಾರಕ್ಕೆ ಜಗಳ ಉಂಟಾಗಿತ್ತು. ಜಗಳ ವಿಕೋಪಕ್ಕೆ ಹೋದಾಗ ಭರತ್ , ಶರವಣನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿದ್ದ ಪೊಲೀಸರು ಇಬ್ಬರನ್ನೂ ಜೈಲಿಗೆ ಕಳುಹಿಸಿದ್ದರು. ಕೆಲವೇ ದಿನಗಳಲ್ಲಿ ಅವರಿಬ್ಬರೂ ಜಾಮೀನಿನ ಮೇಲೆ ಹೊರಬಂದಿದ್ದರು.
ಭರತ್‍ ತನ್ನನ್ನು ಕೊಲೆ ಮಾಡಬಹುದು ಎಂದು ಭೀತಿಗೊಳಗಾಗಿದ್ದ ಶರವಣ, ಭರತ್‌ ನನ್ನೇ ಮುಗಿಸುವ ಯೋಜನೆ ರೂಪಿಸಿದ್ದ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕೆ.ಆರ್. ಮಾರುಕಟ್ಟೆ ಕಾಂಪ್ಲೆಕ್ಸ್‌ ಗೆ ನಾಲ್ಕೈದು ಮಂದಿ ಸಹಚರರ ಜತೆ ಶರವಣ ಬಂದಿದ್ದಾನೆ. ಅಲ್ಲಿದ್ದ ಭರತ್ ಮೇಲೆ ಏಕಾಏಕಿ ದಾಳಿ ನಡೆಸಿ ಮಚ್ಚು-ಲಾಂಗ್‍ ಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ಸಿಟಿ ಮಾರುಕಟ್ಟೆ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮಾರುಕಟ್ಟೆಯ ಸಣ್ಣ ರೌಡಿಗಳ ಮೇಲೆ ನಿಗಾ ಇಟ್ಟು, ಮಾಹಿತಿ ಸಂಗ್ರಹಿಸುತ್ತಿದ್ದಾರೆ.
SCROLL FOR NEXT