ಸಂಗ್ರಹ ಚಿತ್ರ 
ರಾಜ್ಯ

ಬಮೂಲ್ ಚುನಾವಣೆ ಏಕಾಏಕಿ ಮುಂದೂಡಿಕೆ: ಜೆಡಿಎಸ್ ನಡೆಗೆ ಕಾಂಗ್ರೆಸ್ ತೀವ್ರ ಅಸಮಾಧಾನ

ಮೈತ್ರಿ ನಾಯಕರ ನಡುವಿನ ತೀವ್ರ ತಿಕ್ಕಾಟ, ಸಂಘರ್ಷದ ಪರಿಣಾಮ ಇಂದು ನಡೆಯಬೇಕಿದ್ದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಹಠಾತ್ ಮುಂದೂಡಲಾಗಿದೆ.

ಬೆಂಗಳೂರು: ಮೈತ್ರಿ ನಾಯಕರ ನಡುವಿನ ತೀವ್ರ ತಿಕ್ಕಾಟ, ಸಂಘರ್ಷದ ಪರಿಣಾಮ ಇಂದು ನಡೆಯಬೇಕಿದ್ದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಹಠಾತ್ ಮುಂದೂಡಲಾಗಿದೆ.
ಕರ್ನಾಟಕದಲ್ಲಿ ಚುನಾವಣಾ ರಾಜಕಾರಣ ವಿಕೋಪಕ್ಕೆ ತಿರುಗಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಎಚ್ ಡಿ ರೇವಣ್ಣ ವಿರುದ್ಧ ಕೆಲವು ಕಾಂಗ್ರೆಸ್ ಶಾಸಕರು ಕೆಂಡಾಮಂಡಲರಾಗಿದ್ದಾರೆ, ಲೋಕಸಭೆಯ ಫಲಿತಾಂಶ ಪ್ರಕಟವಾಗುವ ಮುನ್ನವೇ ಮೈತ್ರಿ ಪಕ್ಷಗಳ ನಡುವೆ ಜಂಗಿ ಕುಸ್ತಿ ಆರಂಭವಾಗಿದ್ದು, ರಾಜಕೀಯ ತಾಕಲಾಟದ ಪರಿಣಾಮ ಇಂದು ನಡೆಯಬೇಕಿದ್ದ ಬಮೂಲ್ ಚುನಾವಣೆಯನ್ನು ಕೋರಂ ಇಲ್ಲ ಎಂದು ಮುಂದೂಡಲಾಗಿದೆ. ಈ ಬೆಳವಣಿಗೆಯಿಂದ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಲ್ಲಿ ತೀವ್ರ‌ ಅಸಮಾಧಾನ ವ್ಯಕ್ತವಾಗಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶವನ್ನೊಳಗೊಂಡ ಬೆಂಗಳೂರು ಹಾಲು ಒಕ್ಕೂಟಕ್ಕೆ ಮಾಗಡಿಯ ನರಸಿಂಹಮೂರ್ತಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದರು. ಆದರೆ ನರಸಿಂಹ ಮೂರ್ತಿ ಅವರು ಕಾಂಗ್ರೆಸ್ ನಾಯಕ, ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಅವರ ಬೆಂಬಲಿಗರು ಎನ್ನುವ ಕಾರಣಕ್ಕೆ ಜೆಡಿಎಸ್ ನಾಯಕರು ತಂತ್ರಗಾರಿಕೆ ರೂಪಿಸಿ ಅವರ ಮೇಲಿದ್ದ ಹಳೆಯ ಪ್ರಕರಣಕ್ಕೆ ಮರು ಜೀವ ನೀಡಿ ಅವರನ್ನು ರಾತ್ರೋರಾತ್ರಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಲ್ಲಿ ಸಫಲರಾದರು. ಈ ಬೆಳವಣಿಗೆ ಹಿಂದೆ ರೇವಣ್ಣ ಅವರ ಕೈವಾಡವಿದೆ ಎನ್ನುವುದು ಕಾಂಗ್ರೆಸ್ ನಾಯಕರ ಆರೋಪವಾಗಿದೆ.
ಮತ್ತೊಂದು ಮೂಲಗಳ ಪ್ರಕಾರ ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ರೇವಣ್ಣ ಸೇರಿ ಬಾಲಕೃಷ್ಣ ಬೆಂಬಲಿಗರಿಗೆ ಈ ಹುದ್ದೆ ತಪ್ಪಿಸುವಲ್ಲಿ ಸಫಲವಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಚಿವ ಡಿ.ಕೆ. ಶಿವಕುಮಾರ್ ವಿದೇಶೀ ಪ್ರವಾಸ ಮುಗಿಸಿ ಬರುವವರೆಗೂ ಚುನಾವಣೆ ಮುಂದೂಡಲು ತೀರ್ಮಾನಿಸಲಾಗಿದೆ. ಉಪಮುಖ್ಯಮಂತ್ರಿ ಪರಮೇಶ್ವರ್, ಡಿ.ಕೆ. ಶಿವಕುಮಾರ್ , ಡಿ.ಕೆ. ಸುರೇಶ್ , ಕೃಷ್ಣ ಭೈರೇಗೌಡ, ಎಸ್ ಟಿ ಸೋಮಶೇಖರ್, ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ನಡೆಸಿ ಅಧ್ಯಕ್ಷರ ಚುನಾವಣೆ ನಡೆಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಡೈರಿ ಅಧ್ಯಕ್ಷ ಚುನಾವಣೆ ವಿಚಾರದಲ್ಲಿ ಎಚ್ ಡಿ ರೇವಣ್ಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೈ ಶಾಸಕರು ಆರೋಪ ಮಾಡುತ್ತಿದ್ದಾರೆ, ಏಳು ನಿರ್ದೇಶಕರನ್ನು ಕಾಂಗ್ರೆಸ್ ಹೊಂದಿದ್ದರೂ ಮೂವರು ನಿರ್ದೇಶಕರನ್ನು ಮಾತ್ರ ಹೊಂದಿರುವ ಜೆಡಿಎಸ್, ಚುನಾವಣೆ ಎದುರಿಸುವ ಬದಲು ಮೈತ್ರಿ ಧರ್ಮ ಪಾಲಿಸದೆ ರಾತ್ರೋ ರಾತ್ರಿ ಕಾಂಗ್ರೆಸ್ ಅಭ್ಯರ್ಥಿಯನ್ನೇ ಅನರ್ಹಗೊಳಿಸಿದೆ ಎಂದು ಕೆಲವರು ಕಿಡಿ ಕಾರಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ರೇವಣ್ಣ ವಿರುದ್ಧ ಕಾಂಗ್ರೆಸ್ ನಾಯಕರು ಖಾಸಗಿ ಹೋಟೇಲ್ ನಲ್ಲಿ ಸಭೆ ಸೇರಿ ಜೆಡಿಎಸ್ ದಬ್ಬಾಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಮುಂದುವರೆದರೆ ಸರ್ಕಾರ ನಡುಸುವುದಕ್ಕೂ ಕಷ್ಟವಾಗಲಿದೆ. ಡೈರಿ ಚುನಾವಣೆಯಲ್ಲೂ ಕಾಂಗ್ರೆಸ್ ನವರಿಗೆ ಜೆಡಿಎಸ್ ಅವಕಾಶ ಕೊಡುವುದಿಲ್ಲ ಅಂದರೆ ಏನರ್ಥ...? ಈ ದಬ್ಬಾಳಿಕೆಯನ್ನು ಸಹಿಸಿಕೊಂಡು ಹೋಗುವುದು ಬೇಡ ಎಂದು ಕೆಲ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ.
ಮುಖ್ಯಮಂತ್ರಿಯವರಿಗೆ ಎಲ್ಲ ವಿಚಾರ ಗೊತ್ತಿದ್ದರೂ ಬೇಕೆಂದೇ ನಾಟಕವಾಡುತ್ತಿದ್ದಾರೆ, ಬಮೂಲ್ ಗೂ ರೇವಣ್ಣಗೂ ಏನು ಸಂಬಂಧ.? ಬಮೂಲ್ ಮೇಲೆ ರೇವಣ್ಣ ಯಾಕೆ ದಬ್ಬಾಳಿಕೆ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಜವಾಬ್ದಾರಿ ಮರೆತ ಕೆಲ ಮಾಧ್ಯಮಗಳಿಂದ ಸ್ಫೋಟಕ ತಯಾರಿಸುವ ಕುರಿತು ವರದಿ; ಎಚ್ಚರಿಕೆ ಕೊಟ್ಟ ಕೇಂದ್ರ ಸರ್ಕಾರ

Delhi Red Fort blast: ಡಿ.1 ರವರೆಗೆ ಅಲ್ ಫಲಾಹ್ ವಿವಿ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿ ED ಕಸ್ಟಡಿಗೆ

ಮೇಕೆದಾಟು ಯೋಜನೆ: ಹೊಸ DPR ಸಿದ್ಧಪಡಿಸಿ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ: DCM ಡಿಕೆ.ಶಿವಕುಮಾರ್

ಶಬರಿಮಲೆಗೆ ತೆರಳುತ್ತಿದ್ದ ಮಂಡ್ಯದ ಅಯ್ಯಪ್ಪ ಮಾಲಾಧಾರಿಗಳ ಬಸ್‌ ಪಲ್ಟಿ; ಪವಾಡಸದೃಶ ಪಾರಾದ 33 ಮಂದಿ-Video

Asia Cup Rising Stars T20: ಓಮನ್ ತಂಡವನ್ನು ಸೋಲಿಸಿ ಭಾರತ ಸೆಮಿಫೈನಲ್ ಪ್ರವೇಶ

SCROLL FOR NEXT