ರಾಜ್ಯ

ಬೆಂಗಳೂರಿನಲ್ಲಿ ಭಾರೀ ಮಳೆ: ಹಲವೆಡೆ ಧರೆಗುರುಳಿದ ಮರಗಳು, ಇಂದು ಕೂಡ ಗಾಳಿ-ಮಳೆ ನಿರೀಕ್ಷೆ

Sumana Upadhyaya
ಬೆಂಗಳೂರು: ಕಳೆದ ರಾತ್ರಿ ನಗರದಾದ್ಯಂತ ಸುರಿದ ಗಾಳಿ ಮಳೆಗೆ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಧರೆಗುರುಳಿರುವ ಮರಗಳನ್ನು ಕಡಿದು ರಸ್ತೆಯನ್ನು ಸಂಚಾರಕ್ಕೆ ಸುಗಮ ಮಾಡಿಕೊಡಲು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ್ದು ಪಾಲಿಕೆ ಸಿಬ್ಬಂದಿ ಬೆಳಗ್ಗೆಯಿಂದಲೇ ಕಾರ್ಯದಲ್ಲಿ ನಿರತರಾಗಿದ್ದಾರೆ.
ಗುಡುಗು, ಮಿಂಚು, ಭಾರೀ ಗಾಳಿ ಮಳೆಗೆ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ರಸ್ತೆಯನ್ನು ರೆಂಬೆ-ಕೊಂಬೆಗಳಿಂದ ಸ್ವಚ್ಛಗೊಳಿಸಿ ವಾಹನ ಸಂಚಾರಕ್ಕೆ ಸುಗಮ ಮಾಡಿಕೊಡುವಂತೆ ಕೇಳಿದ್ದೇನೆ. ನಗರದ ಜನತೆ ಸಂಚರಿಸುವಾಗ ಜಾಗ್ರತೆಯಿರುವಂತೆ ಕೋರುತ್ತೇನೆ ಎಂದು ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.
ಇಂದು ಕೂಡ ರಾಜ್ಯದ ಒಳ ಭಾಗಗಳು, ಕೇರಳ ಮತ್ತು ತಮಿಳು ನಾಡುಗಳಲ್ಲಿ ಗುಡುಗು-ಮಿಂಚಿನಿಂದ ಕೂಡಿದ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆಯಿಂದ ಆದ ಅನಾಹುತದ ಬಗ್ಗೆ ಜನರು ಬಿಬಿಎಂಪಿಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಕೂಡ ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ.
SCROLL FOR NEXT