ರಾಜ್ಯ

ಕೆಎಸ್ಆರ್ ಟಿಸಿ ನಿಯೋಜಿತ ಉದ್ಯೋಗಿಯನ್ನು ಬೇರೆ ನಿಗಮಗಳಿಗೆ ವರ್ಗಾವಣೆ ಮಾಡುವಂತಿಲ್ಲ; ಹೈಕೋರ್ಟ್

Shilpa D
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ ಆರ್ ಟಿಸಿ) ಕ್ಲಾಸ್ 1 ಹಾಗೂ ಕ್ಲಾಸ್ 2 ಅಧಿಕಾರಿಗಳನ್ನು ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಇಲ್ಲವೇ ಇತರ ನಿಗಮಗಳಿಗೆ ನಿಯೋಜನೆ ಮೇಲೆ ವರ್ಗಾವಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ರಾಜ್ಯ ಹೈಕೋರ್ಟ್ ಆದೇಶಿಸಿದೆ. 
ಕೆಎಸ್ ಆರ್ ಟಿಸಿ ಯಿಂದ ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ನಿಗಮಗಳಿಗೆ ನಿಯೋಜಿಸಿದ್ದ ಆದೇಶವನ್ನು ಪ್ರಶ್ನಿಸಿ ಅಬ್ದುಲ್ ಅಜೀಜ್ ಸೇರಿ ಐವರು ಅಧಿಕಾರಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಪ್ರಕಟಿಸಿದೆ. 
ಕೆಎಸ್ ಆರ್ ಟಿಸಿ ನೌಕರರು ಎಂದು ನೇಮಕಗೊಂಡಿರುವ ಸಿಬ್ಬಂದಿಯನ್ನು, ಸ್ವಾಯತ್ತ ಹಾಗೂ ಸ್ವತಂತ್ರ ಸಂಸ್ಥೆಗಳಾಗಿರುವ ಇತರ ನಿಗಮಗಳಿಗೆ ನಿಯೋಜನೆ ಮಾಡಿರುವುದು ಕಾನೂನುಬಾಹಿರ. ರಸ್ತೆ ಸಾರಿಗೆ ನಿಗಮ ಕಾಯ್ದೆ 1950ರಲ್ಲಿ ಇದಕ್ಕೆ ಅವಕಾಶವಿಲ್ಲ ಎಂದಿರುವ ನ್ಯಾಯಪೀಠ, ಐವರು ಅಧಿಕಾರಿಗಳನ್ನು ಬೇರೆ ನಿಗಮಗಳಿಗೆ ನಿಯೋಜಿಸಿ ಹೊರಡಿಸಿದ್ದ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿದೆ. 
1997ರಲ್ಲಿ ಕೆಎಸ್ ಆರ್ ಟಿಸಿಯನ್ನು ವಿಭಜಿಸಿ ಬಿಎಂಟಿಸಿ, ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ನಿಗಮಗಳನ್ನು ಆರಂಭಿಸಲಾಗಿತ್ತು. ಇವುಗಳು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಒಂದು ಸಂಸ್ಥೆಯಿಂದ ಇನ್ನೊಂದಕ್ಕೆ ವರ್ಗಾಯಿಸಿದರೆ ಅವರು ಅಲ್ಲಿನ ಉದ್ಯೋಗಿಯಾಗಿ ಕೆಲಸ ಮಾಡುತ್ತಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
SCROLL FOR NEXT