ರಾಜ್ಯ

ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ?: ಕಣ್ವ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕನ ಬಂಧನ

Srinivasamurthy VN

ಬೆಂಗಳೂರು: ಐಎಂಎ ವಂಚನೆ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣದ ಸುಳಿವು ಪತ್ತೆಯಾಗಿದ್ದು, ಹೂಡಿಕೆದಾರರಿಗೆ ಬಹುಕೋಟಿ ವಂಚಿಸಿದ ಆರೋಪದ ಮೇರೆಗೆ ಕಣ್ವ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕನನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು,  ಕಡಿಮೆ ದರದಲ್ಲಿ ನಿವೇಶನ ಕೊಡಿಸುವುದಾಗಿ ಹಣ ಪಡೆದು ನಿವೇಶನ ನೀಡದೇ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಕಣ್ವ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ನಂಜುಂಡಯ್ಯ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಕಣ್ವ ಕೋ ಆಪರೇಟಿವ್ ಸೊಸೈಟಿ ವಿರುದ್ಧ ಬಸವೇಶ್ವರ ನಗರ ಠಾಣೆಯಲ್ಲಿ ಗುರುವಾರ ನಾಲ್ಕು ದೂರುಗಳು ದಾಖಲಾಗಿದ್ದವು. ಹೀಗಾಗಿ ಗುರುವಾರ ವಿಚಾರಣೆಗೆ ಕರೆಸಿದ್ದ ಪೊಲೀಸರು ತಡರಾತ್ರಿಯವರೆಗೂ ವಿಚಾರಣೆ ನಡೆಸಿದ ಬಳಿಕ ನಂಜುಂಡಯ್ಯ ಅವರನ್ನು ಬಂಧಿಸಿದ್ದಾರೆ.

ಇತ್ತಿಚೆಗಷ್ಟೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಐಎಂಎ ಕಂಪನಿಯ ಬಹುಕೋಟಿ ವಂಚನೆಯ ನಂತರ ಕಣ್ವ ಗ್ರೂಪ್​ನಲ್ಲಿ ಹಣ ಹೂಡಿದ್ದವರು ಭೀತಿಗೊಳಗಾಗಿದ್ದರು. ಕಣ್ವ ಗ್ರೂಪ್ ಮಾಲೀಕನನ್ನು ಹಣ ಮರಳಿಸುವಂತೆ ಒತ್ತಾಯಿಸಿದ್ದರು. ಆದರೆ, ಕೆಲವರಿಗೆ ಹಣ ಹಿಂದಿರುಗಿಸಿದ್ದ ನಂಜುಂಡಯ್ಯ, ಅನೇಕರಿಗೆ ಹಣ ಮರುಪಾವತಿ ಮಾಡಿರಲಿಲ್ಲ. ಇದೇ ವಿಚಾರವಾಗಿ ನಿನ್ನೆ ಪ್ರತಿಭಟನೆ ಕೂಡ ನಡೆಸಿ, ಬಸವೇಶ್ವರ ನಗರ ಪೊಲೀಸರಿಗೆ ದೂರು ನೀಡಿದ್ದರು.

ಸದ್ಯ ಪೊಲೀಸ್​ ಮೂಲಗಳ ಮಾಹಿತಿ ಪ್ರಕಾರ 350 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ಮತ್ತು ವ್ಯವಹಾರ ನಡೆದಿದೆ ಎನ್ನಲಾಗಿದೆ. ಕಣ್ವ ಗ್ರೂಪ್ಸ್​ನಲ್ಲಿ ನಾಲ್ಕು ಸಾವಿರ ಕಾರ್ಮಿಕರು ಕೆಲಸ ಮಾಡುತಿದ್ದಾರೆ. ಇದೀಗ ಎಲ್ಲರ ಬದುಕು ಅತಂತ್ರವಾಗಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.

SCROLL FOR NEXT