ರಾಜ್ಯ

ಉತ್ತಮ ಕಾರ್ಯನಿರ್ವಹಣೆಯ ಗುರಿ: ಮೂರು ವಿಭಾಗಗಳಾಗಿ ಸಿಸಿಬಿ ವಿಂಗಡನೆ

Lingaraj Badiger

ಬೆಂಗಳೂರು: ಉತ್ತಮ ಕಾರ್ಯನಿರ್ವಹಣೆಗಾಗಿ ಕೇಂದ್ರ ಅಪರಾಧ ದಳ(ಸಿಸಿಬಿ)ವನ್ನು ಮೂರು ಪ್ರತ್ಯೇಕ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. 

ಸಿಸಿಬಿ ಇನ್ನು ಮುಂದೆ ಭಯೋತ್ಪಾದನೆ ನಿಗ್ರಹ ಕೋಶ(ಎಟಿಸಿ), ಮಾದಕ ವಸ್ತು ವಿರೋಧಿ ವಿಭಾಗ ಮತ್ತು ಮಹಿಳಾ ರಕ್ಷಣಾ ವಿಭಾಗವಾಗಿ ಕಾರ್ಯನಿರ್ವಹಿಸಲಿದೆ.

ಈ ಕುರಿತು ಮಾಹಿತಿ ನೀಡಿರುವ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ, ಉಗ್ರವಾದಿ ಚಟುವಟಿಕೆ ಮೇಲೆ ನಿಗಾ, ಮಾದಕ ವಸ್ತುಗಳ ಜಾಲ ನಿಯಂತ್ರಣ ಹಾಗೂ ಮಹಿಳೆಯರಿಗೆ ರಕ್ಷಣೆ ಕುರಿತು ಪ್ರತ್ಯೇಕವಾಗಿ ಗಮನ ಹರಿಸುವ ಸಲುವಾಗಿ ಸಿಸಿಬಿಯನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ ಎಂದಿದ್ದಾರೆ.

ಎಟಿಸಿ ವಿಭಾಗವನ್ನು ಸಿಸಿಬಿ ಡಿಸಿಪಿ ಕುಲದೀಪ್ ಕುಮಾರ್ ಜೈನ್ ನಿರ್ವಹಿಸಲಿದ್ದಾರೆ. ನಗರದಲ್ಲಿ ಉಗ್ರರ ಸುಳಿವು, ಸ್ಲೀಪರ್ ಸೆಲ್​ಗಳ ಕಾರ್ಯಾಚರಣೆ, ಬಾಂಗ್ಲಾ ಉಗ್ರರ ನುಸುಳುವಿಕೆ ಹೆಚ್ಚಾಗುತ್ತಿರುವ ಹಿನ್ನಲೆ ಸಿಸಿಬಿ ಅಧೀನದಲ್ಲಿ ಎಟಿಸಿ ರಚನೆ ಮಾಡಲಾಗಿದೆ.

ಎಟಿಸಿ ಬೆಂಗಳೂರು ಮಹಾನಗರದಲ್ಲಿ ಉಗ್ರ ಚಟುವಟಿಕೆಗಳು, ಸ್ಲೀಪರ್ ಸೆಲ್​ಗಳ ಮೇಲೆ ನಿಗಾ ಇಡಲಿದೆ. ಕಳೆದ ತಿಂಗಳು ನಡೆದ ಎಟಿಎಸ್ ವಾರ್ಷಿಕ ಸಭೆಯಲ್ಲಿ ನಗರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಸದ್ಯ ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹದಳ ಇಲ್ಲ. ಹೀಗಾಗಿ ಪೊಲೀಸರು ಸಿಸಿಬಿಯಲ್ಲೇ ಎಟಿಸಿ ರಚನೆ ಮಾಡಿದ್ದಾರೆ.

SCROLL FOR NEXT