ರಾಜ್ಯ

ವಿಜಯನಗರ ವೈಭವ ಸಾರುವ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ

Srinivasamurthy VN

ಹೊಸಪೇಟೆ: ಜನವರಿಯಲ್ಲಿ ನಡೆಯಲಿರುವ ಹಂಪಿ ಉತ್ಸವಕ್ಕಾಗಿ ಜಿಲ್ಲಾಡಳಿತ ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿದ್ದು, ಇಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಇದೇ ಜನವರಿ 11 ಮತ್ತು 12ರಂದು ಎರಡು ದಿನಗಳ ಕಾಲ‌ ನಡೆಯಲಿರುವ ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಹಂಪಿ ಉತ್ಸವದ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಂಗಳವಾರ ಪರಿಶೀಲಿಸಿದರು. ಎದುರು ಬಸವಣ್ಣ ಮಂಟಪದ ಎದುರುಗಡೆಯ ಸ್ಥಳ, ಗಾಯತ್ರಿ ಪೀಠದ ವೇದಿಕೆಯ ಸ್ಥಳ, ಮಾಧ್ಯಮ ಗ್ಯಾಲರಿ, ಗ್ರೀನ್ ರೂಂ, ಮಳಿಗೆಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.  ಕಳೆದ ಉತ್ಸವದ ಸಂದರ್ಭದಲ್ಲಿ ಕೈಗೊಂಡ ಸಿದ್ಧತೆಗಳ ಮಾದರಿಯಲ್ಲಿಯೇ ಈ ಬಾರಿಯೂ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಡಿಸಿ ನಕುಲ್ ಅವರು ಸೂಚಿಸಿದರು.

ನಂತರ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗುವ ವೇದಿಕೆ ಸ್ಥಳ, ಮೆಹಂದಿ ಮತ್ತು ರಂಗೋಲಿ ಸ್ಪರ್ಧೆಗಳ ಸ್ಥಳಗಳನ್ನು ಪರಿಶೀಲಿಸಿದರು. ಸ್ವಚ್ಛತೆ ಹಾಗೂ ಇನ್ನೀತರ ಕ್ರಮಗಳನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಡಲೇಕಾಳು ಗಣೇಶ ಹಾಗೂ ಸಾಸಿವೆ ಕಾಳು ಗಣೇಶ ಬಳಿ ನಿರ್ಮಿಸಲಾಗುವ ವೇದಿಕೆ ಸ್ಥಳ ಪರಿಶೀಲಿಸಿದರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕಮಲಾಪುರ ಕಡೆಯಿಂದ ಬರುವ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಹಾಗೂ ಕಡ್ಡಿರಾಂಪುರ ಮತ್ತು ಹೊಸಪೇಟೆ ಕಡೆಯಿಂದ ಬರುವ ವಾಹನಗಳ ಪಾರ್ಕಿಂಗ್ ‌ವ್ಯವಸ್ಥೆಯನ್ನು ಪರಿಶೀಲಿಸಿದರು ಮತ್ತು ಟೆಂಡರ್ ಪ್ರಕ್ರಿಯೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೆತ್ತಿಕೊಳ್ಳಲು ಸೂಚಿಸಿದರು. ಎರಡು ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಜಿಲ್ಲಾಧಿಕಾರಿಗಳೊಂದಿಗೆ ಜಿಪಂ ಸಿಇಒ ಕೆ.ನಿತೀಶ್, ಹೊಸಪೇಟೆ ಸಹಾಯಕ ಆಯುಕ್ತ ಶೇಖ್ ತನ್ವೀರ್, ಪ್ರೊಬೆಷನರಿ ಐಎಎಸ್ ಈಶ್ವರ್ ಕಾಂಡೂ, ಅಪರ ಜಿಲ್ಲಾಧಿಕಾರಿ ಮಂಜುನಾಥ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಡಿಯುಡಿಸಿ ಯೋಜನಾ ನಿರ್ದೇಶಕ ರಮೇಶ, ಹವಾಮಾ ಆಯುಕ್ತ ಪಿ.ಎನ್.ಲೋಕೇಶ, ಎಎಸ್ ಐ ಅಧಿಕಾರಿ ಕಾಳಿಮುತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಲೋಕೋಪಯೋಗಿ,ನಿರ್ಮಿತಿ,ಪಿಆರ್ಇಡಿ ಸೇರಿದಂತೆ ‌ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

SCROLL FOR NEXT