ರಾಜ್ಯ

ಟಿಪ್ಪು ಜಯಂತಿ ರದ್ದು ಆದೇಶ ಮರು ಪರಿಶೀಲಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

Lingaraj Badiger

ಬೆಂಗಳೂರು: ಟಿಪ್ಪು ಜಯಂತಿ ರದ್ದುಗೊಳಿಸಿದ ಆದೇಶವನ್ನು ಮರು ಪರಿಶೀಲಿಸುವಂತೆ ಹೈಕೋರ್ಟ್  ರಾಜ್ಯ ಸರ್ಕಾರಕ್ಕೆ ಬುಧವಾರ ನಿರ್ದೇಶನ ನೀಡಿದೆ.

ಟಿಪ್ಪು ಜಯಂತಿ ರದ್ದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಮುಂದಿನ ಎರಡು ತಿಂಗಳ ಒಳಗಾಗಿ ಈ ಕುರಿತು ಕೂಲಂಕುಷ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಿ. ಖಾಸಗಿಯಾಗಿ ಯಾರಾದರೂ ಆಚರಣೆ ಮಾಡಬಯಸಿದರೆ ಅವರಿಗೆ ಸೂಕ್ತ ರಕ್ಷಣೆ ಕೊಡಿ ಎಂದು ಸೂಚಿಸಿದೆ.

2020ರ ಜನವರಿ 3ರಂದು ನಡೆಯುವ ಮುಂದಿನ ವಿಚಾರಣೆ ವೇಳೆ ಸರ್ಕಾರ ತನ್ನ ನಿರ್ಧಾರ ತಿಳಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ರಾಜ್ಯಾದ್ಯಂತ 28 ಜಯಂತಿಗಳನ್ನು ಸರ್ಕಾರವೇ ಆಚರಿಸುತ್ತಿದೆ. ಟಿಪ್ಪು ಜಯಂತಿಯನ್ನು ಮಾತ್ರ ರದ್ದುಪಡಿಸಿರುವುದು ದುರಂತ. ಸರ್ಕಾರದ ಈ ನಡೆಯಿಂದ ಜಾತಿ ತಾರತಮ್ಯವಾದಂತಿದೆ. ಸರ್ಕಾರ ಯಾವಾಗ ಬೇಕಾದರೂ ತನ್ನ ನೀತಿಗಳನ್ನ ಬದಲಿಸಿಕೊಳ್ಳಲಿ. ಆದರೆ, ಅದಕ್ಕೂ ಒಂದು ರೀತಿ, ನಿಯಮಗಳಿವೆ. ಈ ರೀತಿ ಏಕಾಏಕಿ ಜಯಂತಿ ರದ್ದು ಮಾಡಿರುವುದು ಸರಿಯಲ್ಲ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬೇರೆ ಪ್ರಮುಖರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವ ಬಗ್ಗೆ ಹಾಗೂ ಆ ಕುರಿತು ಕೈಗೊಳ್ಳಲಾಗಿರುವ ಆದೇಶಗಳ ಬಗ್ಗೆ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಿ ಎಂದು ನ್ಯಾಯಪೀಠ ಸರ್ಕಾರಕ್ಕೆ ಸೂಚಿಸಿದೆ.

SCROLL FOR NEXT