ರಾಜ್ಯ

ಅಯೋಧ್ಯ ತೀರ್ಪು: ಅಹಿತಕರ ಘಟನೆಗೆ ಆಸ್ಪದವಿಲ್ಲ, ರಾಜ್ಯಾದ್ಯಂತ ಕಟ್ಟೆಚ್ಚರ - ಬಸವರಾಜ ಬೊಮ್ಮಾಯಿ

Raghavendra Adiga

ಬೆಂಗಳೂರು: ಅಯೋಧ್ಯೆಯ ರಾಮಜನ್ಮಭೂಮಿ ಬಾಬ್ರಿ ಮಸೀದಿ ವಿವಾದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಅಹಿತಕರ ಘಟನೆಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನಿಂದ ತೀರ್ಪು ಹೊರಬಂದ ಬಳಿಕ ರಾಜ್ಯದ ಯಾವುದೇ ಭಾಗದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗದಂತೆ, ಶಾಂತಿ-ಸೌಹಾರ್ದತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ರಾಜಭವನದಲ್ಲಿ ಪೊಲೀಸ್ ಪದಕ ಪ್ರದಾನ ಸಮಾರಂಭ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯಾಕಟ್ಟಿನ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಿದ್ದು, ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ಅನುಮಾಸ್ಪದ ವ್ಯಕ್ತಿಗಳು ವಸ್ತುಗಳ ಮೇಲೆ ಕಣ್ಗಾವಲು ಹಾಕಲಾಗಿದೆ. ವದಂತಿಗಳನ್ನು ಹಬ್ಬಿಸದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಅಯೋಧ್ಯೆ ತೀರ್ಪು ಏನೇ ಬರಲಿ, ಶಾಂತಿ-ಸೌಹಾರ್ದ ಕಾಪಾಡುವ ಸಂಬಂಧ ಈಗಾಗಲೇ ಶಾಂತಿ ಪಾಲನಾ ಸಭೆಗಳನ್ನು ನಡೆಸಲಾಗಿದೆ. ಪೊಲೀಸ್ ಅಧಿಕಾರಿಗಳು ಎಲ್ಲಾ ಕಡೆಗಳಲ್ಲಿ ನಿವಾ ವಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲೂ ಗಮನಹರಿಸಲಾಗಿದ್ದು, ಶಾಂತಿ ಕಾಪಾಡಲು ಎಲ್ಲ ರೀತಿಯ ಪಹರೆ ಹಾಕಲಾಗಿದೆ ಎಂದರು.

ಅಯೋಧ್ಯೆ ತೀರ್ಪು ಹೊರ ಬಂದ ಬಳಿಕ ರಾಜ್ಯದಲ್ಲಿ ಶಾಂತಿ ಭಂಗ ಉಂಟಾಗುವಂತಹ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ ಎಂಬ ವಿಶ್ವಾಸವಿದೆ. ಸಮಾಜಘಾತುಕ ವ್ಯಕ್ತಿಗಳ ಮೇಲೂ ನಿಗಾ ಇಟ್ಟಿದ್ದೇವೆ. ಶಾಂತಿ-ಸೌಹಾರ್ದತೆ ಕಾಪಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದಾಗಿ ಅವರು ಹೇಳಿದರು.

ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗಿದೆ. ಕೇಂದ್ರದಿಂದ ಬಂದಿರುವ ಸಲಹೆ-ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸಲಾಗುತ್ತಿದೆ. ಒಟ್ಟಾರೆ ಶಾಂತಿ-ಸೌಹಾರ್ದತೆ ಕಾಪಾಡಲು ಏನು ಬೇಕೋ ಅದನ್ನೆಲ್ಲಾ ಮಾಡಲಾಗಿದೆ ಎಂದರು.

ಏತನ್ಮಧ್ಯೆ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಅವರು ನಗರದ ಎಲ್ಲಾ ಹೆಚ್ಚುವರಿ ಪೊಲೀಸ್ ಆಯುಕ್ತರುಗಳು ಜಂಟಿ ಆಯುಕ್ತರು ೮ ವಿಭಾಗಗಳ ಡಿಸಿಪಿಗಳ ಸಭೆ ನಡೆಸಿ ರಾಮಜನ್ಮಭೂಮಿ ಬಾಬ್ರಿ ಮಸೀದಿ ವಿವಾದದ ತೀರ್ಪು ಈದ್ ಮಿಲಾದ್ ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ಭದ್ರತೆ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಿದರು.

ಸಿಲಿಕಾನ್ ನಗರಿ ಬೆಂಗಳೂರು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಡೀ ಜಗತ್ತಿನ ಗಣ್ಯಾತಿಗಣ್ಯರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಯಾವುದೇ ರೀತಿಯಲ್ಲೂ ಶಾಂತಿ ಕದಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. 

SCROLL FOR NEXT