ರಾಜ್ಯ

ಸಹಕಾರಿ ರಂಗಕ್ಕೆ ಕಪ್ಪುಚುಕ್ಕೆ; ಸಾಲಮನ್ನಾ ಯೋಜನೆಯಡಿ ಸರ್ಕಾರಿ ಖಜಾನೆಗೆ ಕನ್ನಾ 

Nagaraja AB

ಬಾಗಲಕೋಟೆ: ರಾಜಕಾರಣ ಪ್ರವೇಶದ ಮೊದಲು ಮೆಟ್ಟಿಲು, ಸಮಾಜ ಹಾಗೂ ಸರ್ಕಾರದ ಪಾಲಿಗೆ ಅತ್ಯಂತ ವಿಶ್ವಾಸಾರ್ಹ ಕ್ಷೇತ್ರವೆಂದೇ ಬಿಂಬಿತವಾಗಿರುವ ಸಹಕಾರಿ ಕ್ಷೇತ್ರದ ಅಸ್ತಿತ್ವವನ್ನೇ ಅಲುಗಾಡಿಸುವ ಜತೆಗೆ ಸರ್ಕಾರದ ಖಜಾನೆಯನ್ನೇ ಲೂಟಿ ಹೊಡೆಯುವ ಪ್ರಯತ್ನ ಜಿಲ್ಲೆಯ ಕೆಲ ಸಹಕಾರಿ ಸೊಸೈಟಿಗಳಲ್ಲಿ ನಡೆದಿರುವ ಅಂಶ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರೈತರಿಗೆ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಿತ್ತು. ಸೊಸೈಟಿಗಳ ಮೂಲಕ ರೈತರ ಸಾಲಮನ್ನಾ ಸೌಲಭ್ಯವನ್ನು ರೈತರಿಗೆ ತಲುಪಿಸುವ ಕೆಲಸ ನಡೆದಿತ್ತು. ಈ ವೇಳೆ ಜಿಲ್ಲೆಯ ಬಾದಾಮಿ ತಾಲೂಕು ಕುಳಗೇರಿ ಕ್ರಾಸ್‌ನಲ್ಲಿರುವ ಸಹಕಾರಿ ಸಂಘ ಮತ್ತು ನೀರಲಕೇರಿ ಸಹಕಾರಿ ಸಂಘದಲ್ಲಿ ಸರ್ಕಾರಕ್ಕೆ ಪಂಗನಾಮ ಹಾಕುವ ಕೆಲಸ ನಡೆದಿರುವುದು ಬಟಾಬಯಲಾಗಿದೆ.

ಜಿಲ್ಲೆಯ ಕೆಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ರೈತರು ಪಡೆದ ಸಾಲ ೫೦ ಸಾವಿರ ರೂ.ಗಳಾಗಿದ್ದರೂ, ಸಾಲಮನ್ನಾ ಯೋಜನೆಯಡಿ ಅವರ ಖಾತೆಗೆ ಜಮೆ ಆಗಿದ್ದು ಬರೊಬ್ಬರಿ ೧ ಲಕ್ಷ ರೂ. ಏಕೆ ಹೀಗೆ ಎಂದು ರೈತರು ಸಂಬಂಧಿಸಿದ ಸೊಸೈಟಿ ಸಿಬ್ಬಂದಿ ಪ್ರಶ್ನಿಸಿದಾಗ ಮುದ್ರಣ ದೋಷ ಎನ್ನುವ ಉತ್ತರ ಸಿಕ್ಕಿದೆ. ಆದರೆ ಸೊಸೈಟಿ ಸಿಬ್ಬಂದಿ ಉದ್ದೇಶ ಪೂರ್ವಕವಾಗಿಯೇ ರೈತರು ಪಡೆದ ಸಾಲಕ್ಕಿಂತ ಹೆಚ್ಚಿನ ಸಾಲವನ್ನು ಸರ್ಕಾರಕ್ಕೆ ತೋರಿಸಿದ್ದಾರೆ. 

ಜಿಲ್ಲಾ ಸಹಕಾರಿ ನಿಬಂಧಕರು ಪ್ರಕರಣಕ್ಕೆ ಸಂಬಂಧಿಸಿದಂತೆ  ಈಗಾಗಲೇ ನಾಲ್ವರನ್ನು ಅಮಾನತುಗೊಳಿಸಿ, ಅವರ ವಿರುದ್ಧ ಬಾದಾಮಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಗೆ ಆದೇಶಿಸಿದ್ದಾರೆ.

ಸಾಲಮನ್ನಾ ಯೋಜನೆಯಡಿ ಜಿಲ್ಲೆಯ ೧,೪೦,೭೩೨ ಜನ ರೈತರು ಫಲಾನುಭವಿಗಳಿದ್ದು, ಇವರ ಸಾಲ ೭೫೦.೯೮ ಕೋಟಿ. ರಾಜ್ಯದಲ್ಲೇ ಅತೀ ಹೆಚ್ಚು ಸಾಲಮನ್ನಾ ಆಗಿದ್ದು ಜಿಲ್ಲೆಯಲ್ಲಿ. ಕೇವಲ ಕೆಲ ರೈತ ಸಾಲಮನ್ನಾ ವಿಷಯದಲ್ಲಿ ಇದು ಆಗಿಲ್ಲ, ಮೃತ ರೈತರ ಹೆಸರಲ್ಲೂ ಇಂತಹ ಪ್ರಕರಣಗಳು ನಡೆದಿರಬಹುದು ಎನ್ನುವ ಶಂಕೆ ಅಧಿಕಾರಿಗಳನ್ನು ಕಾಡಲಾರಂಭಿಸಿದೆ. ಸೊಸೈಟಿ ಸಿಬ್ಬಂದಿ ದುರಾಸೆಯಿಂದ ಈ ಪ್ರಕರಣ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದ್ದರೂ ಘಟನೆ ಇಡೀ ಸಹಕಾರಿ ಕ್ಷೇತ್ರವನ್ನು ಸಂಶಯ ದೃಷ್ಟಿಯಿಂದ ನೋಡುವಂತಾಗಿದೆ.

ಕೇವಲ ಸೊಸೈಟಿ ಸಿಬ್ಬಂದಿಯಿಂದ  ಮಾತ್ರ ಈ ವಂಚನೆ ನಡೆದಿರಲಿಕ್ಕಿಲ್ಲ ಎನ್ನುವ ಸಂಶಯದ ಸುಳಿ ಸುತ್ತತೊಡಗಿದೆ. ಬಾಗಲಕೋಟೆ ಜಿಲ್ಲೆ ಸಹಕಾರಿ ಕ್ಷೇತ್ರದ ಬಲಾಢ್ಯ ಕೋಟೆಯಂತಿದೆ. ವಿಜಯಪುರ ಅಖಂಡ ಜಿಲ್ಲೆಯಿಂದ ಬಾಗಲಕೋಟೆ ಹೊಸ ಜಿಲ್ಲೆಯಾಗಿ ಉದಯಿಸಿದ ನಂತರ ವಿಜಯಪುರ ಡಿಸಿಸಿ ಬ್ಯಾಂಕ್‌ನಿಂದ  ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತ್ಯೇಕಗೊಂಡು ಕೆಲಸ ಮಾಡುತ್ತಿದೆ. ಹೊಸ ಜಿಲ್ಲೆ ಆದಾಗಿನಿಂದಲೂ ಬಿಡಿಸಿಸಿ ಬ್ಯಾಂಕ್ ಪ್ರತಿ ವರ್ಷ ಅತ್ಯುತ್ತಮ ಸಹಕಾರಿ ಬ್ಯಾಂಕ್‌ಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡು ಉಳಿಸಿಕೊಂಡು ಬಂದಿದೆ. ಇಷ್ಟೊಂದು ಒಳ್ಳೆಯ ಹೆಸರು ಮಾಡಿರುವ ಬಿಡಿಸಿಸಿ ಬ್ಯಾಂಕ್ ಅಧೀನದಲ್ಲಿ ಕೆಲಸ ಮಾಡುತ್ತಿರುವ ಸೊಸೈಟಿಗಳಲ್ಲಿ ಸರ್ಕಾರವನ್ನೇ ಲೂಟಿ ಮಾಡುವ ಪ್ರಕರಣ ನಡೆದಿರುವುದು ಇಡೀ ಜಿಲ್ಲೆ ತಲೆ ತಗ್ಗಿಸುವಂತಾಗಿದೆ.

ರೈತರ ಸಾಲಮನ್ನಾ ಯೋಜನೆ ಪ್ರಕರಣದಲ್ಲಿ ಬೆಳಕಿಗೆ ಬಂದಿರುವ ಈ ಅಂಶದ ಕುರಿತು ಸಮಗ್ರ ತನಿಖೆ ಆಗಬೇಕು. ತನಿಖೆ ಕೇವಲ ಜಿಲ್ಲೆಯ ಪ್ರಾಥಮಿಕ ಸಹಕಾರಿ ಸಂಘಗಳಿಗೆ ಸೀಮಿತವಾಗದೇ ರಾಜ್ಯದ ಎಲ್ಲ ಪ್ರಾಥಮಿಕ ಸಹಕಾರಿ ಸಂಘಗಳನ್ನು ತನಿಖೆ ವ್ಯಾಪ್ತಿಗೆ ಒಳಪಡಿಸಬೇಕು ಎಂದ ರೈತರು ಆಗ್ರಹಿಸಲಾರಂಭಿಸಿದ್ದಾರೆ. ಸರ್ಕಾರದ ಖಜಾನೆಯನ್ನೇ ಲೂಟಿ ಮಾಡಲು ಹೊರಟಿರುವ ಪ್ರಕರಣದಲ್ಲಿ ಅದೆಷ್ಟೋ ಇನ್ನೂ ಕಾಣದ ಕೈ ಗಳು ಕೆಲಸ ಮಾಡಿವೆ ಏನೋ ಎನ್ನುವ ಅಂಶಯ ರೈತ ಸಮೂಹವನ್ನು ಕಾಡಲಾರಂಭಿಸಿದೆ.

ಬಾಗಲಕೋಟೆ ಜಿಲ್ಲೆ ಕೆಲ ಕಡೆಗಳಲ್ಲಿ ಮಾತ್ರ ವಿಷಯ ಬೆಳಕಿಗೆ ಬಂದಿದ್ದು, ಒಂದೊಮ್ಮೆ ಈ ಕುರಿತು ರಾಜ್ಯ ಮಟ್ಟದಲ್ಲಿ  ಸಮಗ್ರ ತನಿಖೆ ಆದಲ್ಲಿ ಇನ್ನೂ ಅನೇಕ ಇಂತಹ ಪ್ರಕರಣಗಳು ಹೊರ ಬೀಳಲಿವೆ. ಈ ಪ್ರಕರಣದಲ್ಲಿ ಕೇವಲ ಸಿಬ್ಬಂದಿ ಅಷ್ಟೆ ಅಲ್ಲ ಅದೆಷ್ಟೋ  ಜನ ಸಹಕಾರಿ ದಿಗ್ಗಜರ ಹೂರಣವೂ ಹೊರ ಬೀಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎನ್ನುವುದು ರೈತರ ವಾದವಾಗಿದೆ. ಈ ಪ್ರಕರಣವನ್ನು ರಾಜ್ಯದ ಸಹಕಾರಿ ಸಚಿವರು ಎಷ್ಟರ ಗಂಭೀರವಾಗಿ ಪರಿಗಣಿಸುತ್ತಾರೋ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ವರದಿ: ವಿಠ್ಠಲ ಆರ್. ಬಲಕುಂದಿ 

SCROLL FOR NEXT