ರಾಜ್ಯ

ಮಂಡ್ಯ: ಗೂಡ್ಸ್ ಟೆಂಪೋ- ಟಾಟಾ ಸುಮೋ ನಡುವೆ ಭೀಕರ ಅಪಘಾತ, 8 ಮಂದಿ ದುರ್ಮರಣ

Sumana Upadhyaya

ಮಂಡ್ಯ:ವಾಹನ ಹಿಂದಿಕ್ಕುವ ಭರದಲ್ಲಿ ಟೆಂಪೋ ಗೂಡ್ಸ್ ಮತ್ತು  ಟಾಟಾ ಸುಮೋ‌ ನಡುವೆ ಮುಖಾಮುಖಿ ಡಿಕ್ಕಿಯಾಗಿ 8 ಮಂದಿ ಮೃತಪಟ್ಟಿರುವ ಭೀಕರ ಘಟನೆ ನಾಗಮಂಗಲ ತಾಲ್ಲೂಕಿನ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ರಾಮದೇವನಹಳ್ಳಿ ಸಮೀಪ ಕಳೆದ ರಾತ್ರಿ ಸಂಭವಿಸಿದೆ.


ಬಾಕರ್ ಷರೀಫ್ ಬಿನ್ ಇಸ್ಮಾಯಿಲ್ ಷರೀಫ್ (50),ತಾಹೀರ್ ಬಿನ್ ಸುಲ್ತಾನ್ ಷರೀಫ್(30),ನೌಷದ್ ಬಿನ್ ಮಕ್ಬೂಲ್ ಪಾಷ(45),ಹಸೀನ್ ತಾಜ್ ಕೋಂ ಖಲೀಂ(50),ಮೆಹಬೂಬ್ ಜಾನ್ ಬಿನ್ ದಸ್ತರ್ ಖಾನ್(50),ಮಕ್ಸೂದ್ ಬಿನ್ ಮಹಮ್ಮದ್ (25),ಸಾಹಿದಾ  (50), ಅಕ್ಬರಅಲಿ(40) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.


ನಾಗಮಂಗಲದಿಂದ ಬೆಳ್ಳೂರು ಕಡೆಗೆ ಸಂಚರಿಸುತ್ತಿದ್ದ ಟಾಟಾ ಸುಮೋಗೆ ಬೆಳ್ಳೂರಿನಿಂದ ನಾಗಮಂಗಲ ಕಡೆಗೆ‌ ಸಂಚರಿಸುತ್ತಿದ್ದ  ಗೂಡ್ಸ್ ಟೆಂಪೋ ಮುಖಾಮುಖಿ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಮುಂದೆ ಚಲಿಸುತ್ತಿದ್ದ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿದೆ ಎನ್ನಲಾಗಿದೆ.


ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬೆಳ್ಳೂರು ಠಾಣೆಯ ಪೊಲೀಸರು ಗಾಯಾಳುಗಳನ್ನು ತಾಲ್ಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 6 ಮಂದಿ ಸ್ಥಳದಲ್ಲಿಯೇ ಸಾವನ್ನಿದರೆ ಸಾಹಿದಾ  ಮತ್ತು ಅಕ್ಬರ ಅಲಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ,
ಟೆಂಪೋ ಡ್ರೈವರ್ ಮತ್ತು ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.


 ಟ್ರಾಫಿಕ್ ಜಾಮ್: ಭೀಕರ ರಸ್ತೆ ಅಪಘಾತದಿಂದಾಗಿ ಹೆದ್ದಾರಿಯ ವಾಹನ ಸಂಚಾರಕ್ಕೆ‌ಅಡ್ಡಿಯುಂಟಾಗಿತ್ತು. ಘಟನೆಯಲ್ಲಿ ಜಖಂಗೊಂಡಿದ್ದ ಎರಡೂ ವಾಹನಗಳನ್ನು ತೆರವುಗೊಳಿಸಿದ ಪೊಲೀಸರು ಇತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಎಸ್ಪಿ ಪರಶುರಾಮ್, ಡಿವೈಎಸ್ ಪಿ ವಿಶ್ವನಾಥ್ ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಈ ಸಂಬಂಧ‌ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾರ್ಟಿಮಾಡಲು ಹೊರಟಿದ್ದರು: ಮೃತಪಟ್ಟವರೆಲ್ಲರೂ ನಾಗಮಂಗಲ ಪಟ್ಟಣದ ನಿವಾಸಿಗಳಾಗಿದ್ದು, ಅಲ್ ಫಲಾಹ್ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದಾರೆ. ತಮ್ಮ ಆಡಳಿತ ಮಂಡಳಿಯ ಅಧಿಕಾರಾವಧಿ ಮುಗಿದಿದ್ದರಿಂದ ಎಲ್ಲರೂ ಸೇರಿ ಪಾರ್ಟಿ ಮಾಡಲು  ಬೆಳ್ಳೂರು ಕಡೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

SCROLL FOR NEXT