ರಾಜ್ಯ

ದಾಖಲೆಯತ್ತ ಭಾರದ್ವಾಜ್ ಟ್ರೇಡ್‌ ಮಿಲ್ ಓಟ

Srinivasamurthy VN

ಬಾಗಲಕೋಟೆ: ಘಡಘಡ ನಡುಗುವ ಚಳಿಯಲ್ಲೂ ಮೈ ಬೆವರುವ ದೃಶ್ಯ ಬಾಗಲಕೋಟೆ ಜನತೆಯಲ್ಲಿ ರೋಮಾಂಚನ ಎನ್ನಿಸುತ್ತಿದೆ. ದೆಹಲಿಯ ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾರಥಾನ್ ಅರುಣ ಭಾರದ್ವಾಜ್ ಚಳಿಯಲ್ಲೂ ಬೆವರುತ್ತಿದ್ದರು.

ನಗರದ ಎಂಜಿನಿಯರಿಂಗ್ ಕಾಲೇಜು ವೃತ್ತದಲ್ಲಿ ಗುರುವಾರ ಸಂಜೆ ದೇಹಲಿಯ ರಕ್ಷಣಾ ಸಚಿವಾಲಯದಲ್ಲಿ ಸಹಾಯಕ ವಿಭಾಗ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಅರುಣ ಭಾರದ್ವಾಜ್ ಟ್ರೇಡ್‌ಮಿಲ್ ಓಟ ಆರಂಭಿಸಿದರು. ಭಾರದ್ವಾಜ್ ಅವರ ಓಟ ಕಂಡ ಜನ ಇದೆಲ್ಲ ನಮ್ಮಂಥವರಿಗೆ ಸಾಧ್ಯವಿಲ್ಲ. ಇದಕ್ಕೆಲ್ಲ ಸತತ ಸಾಧನೆ ಬೇಕು ಎನ್ನುತ್ತಲೇ ಅಚ್ಚರಿ ವ್ಯಕ್ತ ಪಡಿಸಿದರು.

ಭಾರದ್ವಾಜ್ ಅವರು ಗುರುವಾರ ಸಂಜೆ ಟ್ರೇಡ್‌ಮಿಲ್ ಮೇಲೆ ಓಟ ಆರಂಭಿಸಿದ್ದು, ಸತತ ೨೪ ಗಂಟೆಗಳ ಕಾಲ(ಶುಕ್ರವಾರ) ಸಂಜೆ ೭ ರ ವರೆಗೆ ಓಡಲಿದ್ದಾರೆ. ಶುಕ್ರವಾರ ಬೆಳಗಿನ ಜಾವದ ಚಳಿಯಲ್ಲಿನ ಅವರ ಸತತ ಓಟ ವಾಯುವಿಹಾರಗಳ ಗಮನ ಸೆಳೆಯಿತು.

ನಗರದ ರಿಯಲ್ ಸ್ಪೋರ್ಟ್ ಅಸೋಸಿಯೇಶನ್ ರನ್ ಫಾರ್ ಹೆಲ್ತ್ ಆ್ಯಂಡ್ ಚಾರಟಿ ಹೆಸರಿನಲ್ಲಿ ಡಿ. ೧ ರಂದು ಹಾಫ್ ಮ್ಯಾರಥಾನ್ ಹಮ್ಮಿಕೊಂಡಿದೆ. ಆ ಹಿನ್ನೆಲೆಯಲ್ಲಿ ಅವರು ಸುದೀರ್ಘ ಓಟ ಆರಂಭಿಸಿದ್ದಾರೆ. ಓಟದ ಸಮಯದಲ್ಲಿ ತಿಂಡಿ, ತಿನಸುಗಳನ್ನು ಸೇವಿಸುವುದಿಲ್ಲ. ಅದರ ಬದಲಿಗೆ ಜ್ಯೂಸ್ ಮತ್ತು ನೀರು ಸೇವಿಸಲಿದ್ದಾರೆ. ಸತತ ೨೪ ಗಂಟೆಗಳ ಓಟದ ವೇಳೆ ಕೇವಲ ಅರ್ಧಗಂಟೆ ಮಾತ್ರ ಅವರು ಆಗಾಗ್ಗೆ ಓಟ ನಿಲ್ಲಿಸಿ ಸುಧಾರಿಸಿಕೊಳ್ಳಲಿದ್ದಾರೆ.

ಬೆಂಗಳೂರಿನಲ್ಲಿ ಈ ಹಿಂದೆ ಸ್ಟೇಡಿಯಂ ರನ್ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ತಮ್ಮ ೨೪ ರ ಹರೆಯದಲ್ಲಿಯೇ ಕಾರ್ಗಿಲ್‌ನಿಂದ ಕನ್ಯಾಕುಮಾರಿವರೆಗೆ ೪ ಸಾವಿರ ಕಿಮಿ ದೂರವನ್ನು ೬೧ ದಿನಗಳಲ್ಲಿ ತಲುಪಿ ದಾಖಲೆ ನಿರ್ಮಿಸಿದ್ದಾರೆ. ಈಗಾಗಲೇ ಇವರು ರಷ್ಯಾ, ಜರ್ಮನಿ, ಇಂಗ್ಲೆಂಡ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾರೆ. ಡಿಸೆಂಬರ್ ೧ ರಂದು ನಗರದಲ್ಲಿ ನಡೆಯಲಿರುವ ಹಾಫ್ ಮ್ಯಾರಥಾನ್ ಹಿನ್ನೆಲೆಯಲ್ಲಿ ಸತತ ೨೪ ಗಂಟೆಗಳ ಟ್ರೇಡ್‌ಮಿಲ್ ಓಟ ನಗರದ ಸಾರ್ವಜನಿಕರನ್ನು ಸೆಳೆಯುತ್ತಿದೆ.

- ವಿಠ್ಠಲ ಆರ್. ಬಲಕುಂದಿ

SCROLL FOR NEXT