ರಾಜ್ಯ

ಬಳ್ಳಾರಿ ಆಯ್ತು, ಮಧುಗಿರಿ ಪ್ರತ್ಯೇಕ ಜಿಲ್ಲೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪರಮೇಶ್ವರ್ ಪತ್ರ

Shilpa D

ಬೆಂಗಳೂರು:  ಮಧುಗಿರಿ, ಪಾವಗಡ, ಕೊರಟಗೆರೆ ಮತ್ತು ಶಿರಾ ಕಂದಾಯ ತಾಲೂಕುಗಳನ್ನು ಒಟ್ಟು ಗೂಡಿಸಿ ಪ್ರತ್ಯೇಕ ನೂತನ ಮಧುಗಿರಿ ಜಿಲ್ಲೆಯನ್ನು ಘೋಷಣೆ ಮಾಡಬೇಕೆಂದು ಕೋರಿ ಮುಖ್ಯಮಂತ್ರಿಗೆ ಡಾ.ಜಿ. ಪರಮೇಶ್ವರ್‌ ಪತ್ರ ಬರೆದಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಭೌಗೋಳಿಕವಾಗಿ ಹೆಚ್ಚಿನ ವಿಸ್ತಾರ ಹೊಂದಿದ್ದು, ಪ್ರತ್ಯೇಕ ಜಿಲ್ಲೆಗೆ ಅರ್ಹವಾಗಿದೆ. ಹೀಗಾಗಿ ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡಬೇಕು ಎಂದು ಕೊರಟಗೆರೆ ಶಾಸಕರಾದ ಡಾ.ಜಿ. ಪರಮೇಶ್ವರ ಅವರು ಒತ್ತಾಯಿಸಿದ್ದಾರೆ. ಈ ಸಂಬಂಧ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಪತ್ರದಲ್ಲಿ ಪ್ರತ್ಯೇಕ ಜಿಲ್ಲೆಯ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ. 

ಮಧುಗಿರಿ ಕೇಂದ್ರ ಸ್ಥಾನದಲ್ಲಿ ಲೋಕೋಪಯೋಗಿ ಜಿಲ್ಲಾ ಪಂಚಾಯಿತಿ , ಕೆಇಬಿ, ಡಿವೈಎಸ್‌ಪಿ, ಎತ್ತಿನ ಹೊಳೆ ಇನ್ನಿತರ ಇಲಾಖೆಗಳ ಉಪವಿಭಾಗಗಳನ್ನು ಒಳಗೊಂಡಿರುವುದಲ್ಲದೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು ಸಹ ಹೊಂದಿದೆ. ಪ್ರತ್ಯೇಕ ಶೈಕ್ಷಣಿಕ ಜಿಲ್ಲೆಯಾಗಿರುವ ಮಧುಗಿರಿಯ ನೆರೆಯ ತಾಲೂಕುಗಳಾದ ಪಾವಗಡ, ಕೊರಟಗೆರೆ ಮತ್ತು ಶಿರಾ ತಾಲೂಕುಗಳಿಗೆ ಕೃಷಿಯೋತ್ಪನ್ನ ಮತ್ತು ವಾಣಿಜ್ಯೋತ್ಪನ್ನಗಳ ಮಾರುಕಟ್ಟೆಗೆ ಕೇಂದ್ರ ಸ್ಥಾನವಾಗಿರುತ್ತದೆ. ಮಧುಗಿರಿಯು ಎಲ್ಲಾ ಹಂತದಲ್ಲಿಯೂ ಜಿಲ್ಲೆಯಾಗಿ ಪರಿವರ್ತನೆ ಹೊಂದಲು ಅರ್ಹತೆ ಹೊಂದಿದ್ದು, ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡುವುದು ಈ ಭಾಗದ ಜನತೆಯ ಬಹು ದಿನಗಳ ಬೇಡಿಕೆಯಾಗಿದೆ ಎಂದು ಪತ್ರದಲ್ಲಿ ಪರಮೇಶ್ವರ್‌ ವಿವರಿಸಿದ್ದಾರೆ. 
 

SCROLL FOR NEXT