ರಾಜ್ಯ

ಎಸ್.ಮೂರ್ತಿ ಸೇರಿ ಮೂವರು ಅಧಿಕಾರಿಗಳಿಗೆ ಸೇರಿದ 16 ಕಡೆ ಎಸಿಬಿ ದಾಳಿ: ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ

Vishwanath S

ಬೆಂಗಳೂರು: ವಿಧಾನಸಭೆಯಿಂದ ಅಮಾನತುಗೊಂಡಿರುವ ಕಾರ್ಯದರ್ಶಿ ಎಸ್. ಮೂರ್ತಿ ಸೇರಿ ಮೂವರು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)16 ಕಡೆಗಳಲ್ಲಿ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿ ಪತ್ತೆಹಚ್ಚಿದ್ದಾರೆ.

ವಿಧಾನ ಸಭೆ ಕಾರ್ಯದರ್ಶಿ ಹುದ್ದೆಯಿಂದ ಅಮಾನತುಗೊಂಡಿರುವ ಎಸ್. ಮೂರ್ತಿ ಅವರ ಸದಾಶಿವನಗರದ ಮನೆ, ಜಾಲಹಳ್ಳಿ ಕ್ರಾಸ್‌ನ ಎಚ್.ಎಂ.ಟಿ. ಕಾಲೋನಿಯ ಮನೆ, ಆರ್.ಟಿ. ನಗರದ ಓಂಶಕ್ತಿ ಅಪಾರ್ಟ್‌ಮೆಂಟ್‌ನಲ್ಲಿರುವ ಎರಡು ಫ್ಲಾಟ್, ಕೊಡಗು ಜಿಲ್ಲೆಯ ನಿಡುಗಣಿ ಗ್ರಾಮದ ಕಾಫಿ ತೋಟದ ಮನೆಮೇಲೆ ದಾಳಿ ನಡೆಸಿ, ಅಕ್ರಮ ಆಸ್ತಿ - ಪಾಸ್ತಿಯನ್ನು ಪತ್ತೆಹಚ್ಚಲಾಗಿದೆ.

ಮೂರ್ತಿ ಅವರು, ವಿಧಾನಸಭೆ ಕಾರ್ಯದರ್ಶಿ ಹುದ್ದೆಯಲ್ಲಿದ್ದ ವೇಳೆ ಬೆಳಗಾವಿ ಅಧಿವೇಶನ ಸಮಯದಲ್ಲಿ 10 ಟಿ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಹೊತ್ತಿದ್ದರು. ಇದೇ ಕಾರಣಕ್ಕಾಗಿ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿತ್ತು. ಇನ್ನುಳಿದಂತೆ, ಸರ್ಕಾರದ ಮಹತ್ವದ ಸೀಲ್‌ಗಳನ್ನು ಮೂರ್ತಿ ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಹೊತ್ತಿದ್ದರು.

ಮೂರ್ತಿ ಅವರು ಕೊಡಗು, ಬೆಂಗಳೂರು ಸೇರಿದಂತೆ, ಅನೇಕ ಕಡೆ ಆಸ್ತಿ ಸಂಪಾದಿಸಿದ್ದಾರೆ ಎನ್ನುವ ಕುರಿತು ಮಾಹಿತಿ ಸಂಗ್ರಹಿಸಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ನಗದು, ಚಿನ್ನಾಭರಣ, ಐಷಾರಾಮಿ ವಸ್ತುಗಳು, ಆಸ್ತಿ-ಪಾಸ್ತಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಹೂವಿನಹಡಗಲಿ ಪಂಚಾಯತ್ ರಾಜ್ ಕಾರ್ಯನಿರ್ವಾಹಕ ಅಭಿಯಂತರ ಹನುಮಂತಪ್ಪ ಹಾಗೂ ಹುಮನಾಬಾದ್‌ನ ಪಂಚಾಯತ್ ರಾಜ್ ಉಪವಿಭಾಗದ ಕಿರಿಯ ಅಭಿಯಂತರ ವಿಜಯ ರೆಡ್ಡಿ ಅವರ ಕಚೇರಿ, ಮನೆಗಳ ಮೇಲೆ ದಾಳಿ ನಡೆಸಿ ಆದಾಯಕ್ಕೂ ಮೀರಿ ಗಳಿಸಿದ್ದ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ - ಪಾಸ್ತಿಯನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಗ್ರಾಮ ಪಂಚಾಯಿತ್ ರಾಜ್ ಕಾರ್ಯನಿರ್ವಾಹಕ ಅಭಿಯಂತರ ಕೆ. ಹನುಮಂತಪ್ಪ ಅವರ ಕಚೇರಿ, ಹೊಸಪೇಟೆಯ ಮನೆ, ಹೂವಿನಹಡಗಲಿಯ ಎಸ್.ಕೆ.ಆರ್.ಹೆಚ್. ಸ್ಕೂಲ್, ನಾಗತಿಬಸಾಪುರದಲ್ಲಿನ ಹಳೆಶಾಲೆ, ಹೂವಿನಹಡಗಲಿಯ ಹಳೆಮನೆಯ ಮೇಲೆ ದಾಳಿ ನಡೆಸಲಾಗಿದೆ.

ವಿಜಯ ರೆಡ್ಡಿ ಅವರ ಕಚೇರಿ, ಹುಮನಾಬಾದ್‌ನಲ್ಲಿನ ಮನೆ, ನಿನ್ರಾ ಗ್ರಾಮದ ಮನೆ, ಶಾಪಿಂಗ್ ಕಾಂಪ್ಲೆಕ್ಸ್, ತೋಟದ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಈ ಮೂವರು ಅಧಿಕಾರಿಗಳ 16 ಕಡೆಗಳಲ್ಲಿ ದಾಳಿ ನಡೆಸಿ ಅಕ್ರಮ ಆಸ್ತಿ-ಪಾಸ್ತಿಗಳನ್ನು ಪತ್ತೆಹಚ್ಚಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT