ರಾಜ್ಯ

ಬಾಗಲಕೋಟೆ: ಮನೆ ಮೇಲ್ಛಾವಣಿ ಕುಸಿದು ಮೂವರು ದುರ್ಮರಣ, ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಘೋಷಣೆ

Raghavendra Adiga

ಬಾಗಲಕೋಟೆ: ಮನೆಯ ಮೇಲ್ಛಾವಣಿ ಕುಸಿದು ಮೃತಪಟ್ಟ ಕುಟುಂಬಕ್ಕೆ ಸರ್ಕಾರ ಹದಿನೈದು ಲಕ್ಷ ರೂ. ಪರಿಹಾರ ಘೋಷಿಸಿದೆ.

ಘಟನಾ ಸ್ಥಳಕ್ಕೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಭೇಟಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಸರ್ಕಾರದಿಂದ ತಲಾ ಐದು ಲಕ್ಷ ರೂ ಯಂತೆ ಒಟ್ಟು ಹದಿನೈದು ಲಕ್ಷ ರೂ. ಪರಿಹಾರ ಜೊತೆಗೆ ಅಂತಿಮ ಸಂಸ್ಕಾರಕ್ಕೆ ಹದಿನೈದು ಸಾವಿರ ರೂಪಾಯಿ ನೀಡುವುದಾಗಿ ಶಾಸಕರು ತಿಳಿಸಿದ್ದಾರೆ. ಇದೇ ವೇಳೆ ಘಟನೆಯಲ್ಲಿ ಅಪಾಯದಿಂದ ಪಾರಾದ ಸವಿತಾ ಹಾಗೂ ತನು ಅವರುಗಳಿಗೆ ವಾಸಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.

ಧಾರಾಕಾರವಾಗಿ ಸುರಿದ ಮಳೆಯಿಂದ ಮನೆ ಮೇಲ್ಛಾವಣಿ ಕುಸಿದು ಮೂವರು ಮೃತಪಟ್ಟ ಘಟನೆ ಬಾಗಲಕೋಟೆ ತಾಲೂಕಿನ ಕಿರಸೂರು ಗ್ರಾಮದಲ್ಲಿ ನಡೆದಿದೆ.

ಈರಪ್ಪ ಹಡಪದ (60), ಗೌರವ್ವ ಹಡಪದ(52) ಹಾಗೂ ಮಗ ನಿಂಗಪ್ಪ ಹಡಪದ (35) ಮೃತ ದುರ್ದೈವಿಗಳು. ಘಟನೆಯಲ್ಲಿ ನಿಂಗಪ್ಪನ ಪತ್ನಿ ಸವಿತಾ ಹಾಗೂ ಮಗಳು ತನು ಅಪಾಯದಿಂದ ಪಾರಾಗಿದ್ದರು.

ಗ್ರಾಮದಲ್ಲಿ ನೆರೆಹಾವಳಿ: ಮೃತಕುಟುಂಬಕ್ಕೆ 5 ಲಕ್ಷ ಪರಿಹಾರ 


ಬಾಗಲಕೋಟೆ ಕಿರೆಸೂರ ಗ್ರಾಮದಲ್ಲಿ ಅತಿವೃಷ್ಟಿಯಿಂದ ಮನೆ ಕುಸಿದು ಮೂವರು ಮಂದಿ ಮೃತಪಟ್ಟಿರುವ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಹಾಗೂ ಅಂತ್ಯಸಂಸ್ಕಾರದ ಖರ್ಚು ವೆಚ್ಚ ಭರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಲಾಗಿದೆ ಎಂದು ಬಾಗಲಕೋಟೆ ಉಸ್ತುವಾರಿ ಹೊಂದಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಘಟನೆ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ‌. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಮಣ್ಣುಗೋಡೆ ಮನೆಗಳಲ್ಲಿ ವಾಸಿಸುತ್ತಿರುವವರು ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದರು.

ಮೃತ ಕುಟುಂಬಸ್ಥರ ದುಃಖದಲ್ಲಿ ತಾವು ಸಹ ಭಾಗಿಯಾಗಿದ್ದು, ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ‌ ಎಂದರು.

SCROLL FOR NEXT