ರಾಜ್ಯ

ಈ ಚೌಡೇಶ್ವರಿ ದೇವಿಗೆ ಮದ್ಯ, ಸಿಗರೇಟು, ಗಾಂಜಾ ಹರಕೆಯ ವಸ್ತು!

Sumana Upadhyaya

ಗೋಕಾಕ್: ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಭಕ್ತರು ಪೂಜೆ ಸಲ್ಲಿಸುವಾಗ ಹೂವು, ಹಣ್ಣು ಇತ್ಯಾದಿಗಳನ್ನು ದೇವರಿಗೆ ಸಮರ್ಪಿಸುವುದು ಸಾಮಾನ್ಯ. ಆದರೆ ಗೋಕಾಕ್ ನ ಚೌಡೇಶ್ವರಿ ದೇವಸ್ಥಾನದಲ್ಲಿ ಭಕ್ತರು ದೇವರಿಗೆ ಪ್ರೀತಿಯಿಂದ ಅರ್ಪಿಸುವುದು ಮದ್ಯ, ಸಿಗರೇಟು, ಗಾಂಜಾ ಮೊದಲಾದವುಗಳನ್ನು. ಇಲ್ಲಿ ಪೂಜೆ, ಸಂಪ್ರದಾಯಗಳಲ್ಲಿ ತೊಡಗಿರುವವರು ತೃತೀಯ ಲಿಂಗಿ ಸತೀಶ್ ರಾಮಣ್ಣ ತಲ್ವರ್.


ದಶಕಗಳಿಂದ ಈ ದೇವಸ್ಥಾನಕ್ಕೆ ದೇಶದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಪ್ರತಿವರ್ಷ ಬರುತ್ತಾರೆ. ಇಲ್ಲಿಗೆ ಹರಕೆ ಹೊತ್ತು ಬರುವ ಭಕ್ತರ ಇಷ್ಟಾರ್ಥಗಳು ಈಡೇರಿವೆ ಎಂದು ಹಲವರು ಹೇಳುತ್ತಾರೆ.ಇಲ್ಲಿ ಚೌಡೇಶ್ವರಿ ದೇವಸ್ಥಾನ ನಿರ್ಮಾಣವಾದ ಬಗ್ಗೆ ಸತೀಶ್ ತಲ್ವರ್ ಮತ್ತು ಆಡಳಿತ ಸಿಬ್ಬಂದಿ ಕುತೂಹಲಕಾರಿ ಕಥೆ ಹೇಳುತ್ತಾರೆ.


40 ವರ್ಷಗಳ ಹಿಂದೆ ಚೌಡೇಶ್ವರಿ ದೇವಿ ಕನಸಿನಲ್ಲಿ ಬಂದು ಈ ಜಮೀನಿನಲ್ಲಿ ನಾನು ನೆಲೆಸಿದ್ದೇನೆ. ನನ್ನ ಪೂಜಿಸಲು ಆರಂಭಿಸಿ ಎಂದು ಹೇಳಿ ಹೇಗೆ ಪೂಜಿಸಬೇಕೆಂದು ಸಹ ಹೇಳಿದ್ದಳಂತೆ. ಕನಸು ಬಿದ್ದಾದ ಬಳಿಕ ತಮ್ಮ ಭೂಮಿಯಲ್ಲಿ ಹುಡುಕಿದಾಗ ಸತೀಶ್ ಅವರಿಗೆ ದೇವಿಯ ವಿಗ್ರಹ ಸಿಕ್ಕಿ ಪೂಜೆ ಮಾಡಲು ಆರಂಭಿಸಿದರಂತೆ. 


ತಮ್ಮ ಜಮೀನಿನ ಪಕ್ಕದಲ್ಲಿರುವ ಹಾದಿಯಲ್ಲಿ ಹಾದುಹೋಗುವ ಜನರು ತಾವು ಪೂಜೆ ಮಾಡುತ್ತಿರುವುದು ಕಂಡು ತಾವು ಕೂಡ ಆಚರಿಸಲು ಆರಂಭಿಸಿದರು. ಹಲವು ಭಕ್ತರ ಇಷ್ಟಾರ್ಥಗಳು ಇಲ್ಲಿ ನೆರವೇರಿದ್ದು ಹೀಗಾಗಿ ಚೌಡೇಶ್ವರಿ ದೇವಸ್ಥಾನ ಜನಪ್ರಿಯವಾಗಿದೆ. ಮಂಗಳವಾರ ಮತ್ತು ಶುಕ್ರವಾರಗಳಂದು ಇಲ್ಲಿ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. 


ಇಲ್ಲಿ ಪೂಜಾ ವಿಧಾನ ವಿಭಿನ್ನ. ಭಕ್ತರು ತೆಂಗಿನಕಾಯಿ ಮತ್ತು ಸೀರೆಯನ್ನು ತರುತ್ತಾರೆ. ಒಂದು ಬಟ್ಟೆಯಲ್ಲಿ ತೆಂಗಿನಕಾಯಿ ಕಟ್ಟಿ ದೇವಸ್ಥಾನದ ಹಿಂದಿನ ಮರದಲ್ಲಿ ಕಟ್ಟಿ ತಮ್ಮ ಮನದಿಚ್ಛೆಯನ್ನು ಕೇಳುತ್ತಾರೆ. ಸೀರೆಯನ್ನು ಮರದ ತುಂಡಿನೊಂದಿಗೆ ಉರಿಸಿ ನೀರು ಬಿಸಿ ಮಾಡಿ ಆ ನೀರಿನಲ್ಲಿ ದೇವತೆ ಮೂರ್ತಿಯನ್ನು ತೊಳೆಯಲಾಗುತ್ತದೆ.


ಮದ್ಯ, ಸಿಗರೇಟು, ಗಾಂಜಾ ವ್ಯಸನ ಹೊಂದಿರುವವರು ಈ ದೇವಸ್ಥಾನಕ್ಕೆ ಬಂದು ಅದನ್ನು ಬಿಟ್ಟುಬಿಡಲು ಹರಕೆ ಹೊತ್ತು ಆ ವಸ್ತುಗಳನ್ನು ದೇವಿಯ ಮುಂದಿಟ್ಟು ಹೋಗುತ್ತಾರೆ. ಕೆಲ ದಿನಗಳು ಕಳೆದ ನಂತರ ತಮ್ಮ ದುಶ್ಚಟ ಕೊನೆಯಾಗಿದೆ ಎಂದು ಹೇಳಿ ಮತ್ತೆ ದೇವಸ್ಥಾನಕ್ಕೆ ಬಂದು ಹರಕೆ ತೀರಿಸುತ್ತಾರೆ ಎನ್ನುತ್ತಾರೆ ಸತೀಶ್ ತಲ್ವರ್.

SCROLL FOR NEXT