ರಾಜ್ಯ

ಇದು 'ವೃಷಭಾವತಿ'ಕಥೆ-ವ್ಯಥೆ 

Sumana Upadhyaya

ಬೆಂಗಳೂರು: ಬತ್ತಿಹೋಗುತ್ತಿರುವ ವೃಷಭಾವತಿ ಕಥೆಯಿದು. ವೃಷಭಾವತಿ ಬಸವನಗುಡಿಯ ಬಸವ ದೇವಸ್ಥಾನ ಅಥವಾ ದೊಡ್ಡ ಗಣಪತಿ ದೇವಸ್ಥಾನದ ಹತ್ತಿರದ ಸಣ್ಣ ಗುಡ್ಡದಿಂದ ಚಿಮ್ಮಿ ಹರಿದು ಗಾಳಿ ಆಂಜನೇಯ ದೇವಸ್ಥಾನ ಹತ್ತಿರ ಸಾಗುತ್ತದೆ ಎಂದು ಹೇಳಲಾಗುತ್ತದೆ. ಈ ವೃಷಭಾವತಿ ಕೆರೆಯ ನೀರನ್ನು ಗಾಳಿ ಆಂಜನೇಯ ದೇವಸ್ಥಾನದಲ್ಲಿ ಗರ್ಭಗುಡಿ ಅಭಿಷೇಕಕ್ಕೆ ಮತ್ತು ಇತರ ಕಾರ್ಯಗಳಿಗೆ ಬಳಸುತ್ತಿದ್ದರು ಎಂದು ಹೇಳುತ್ತಾರೆ.


ಇಂದು ವೃಷಭಾವತಿ ನದಿ ದಕ್ಷಿಣಕ್ಕೆ ಹರಿದು ಕಾಡು ಮಲ್ಲೇಶ್ವರ ದೇವಸ್ಥಾನದಿಂದ ಅದರ ಉಪ ನದಿ ಗಾಳಿ ಆಂಜನೇಯ ದೇವಸ್ಥಾನದ ಹತ್ತಿರ ಪೈಪ್ ಲೈನ್ ನ್ನು ಸೇರುತ್ತದೆ. ಇಂದು ಈ ಉಪ ನದಿಯ ನೀರು ಚರಂಡಿಯ ಕೊಳಚೆ ನೀರಿನೊಂದಿಗೆ ಸೇರಿ ಅತ್ಯಂತ ಕಲುಷಿತವಾಗಿದೆ.


ಹಿಂದೆ ವೃಷಭಾವತಿ ನದಿ ನೀರು ಬೆಂಗಳೂರಿಗರಿಗೆ ಗೃಹ ಬಳಕೆಗೆ ಮತ್ತು ಸುತ್ತಮುತ್ತಲಿನವರಿಗೆ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿತ್ತು. ಯಾವಾಗ ಕೈಗಾರಿಕೀಕರಣ ಬೆಂಗಳೂರು ಸುತ್ತಮುತ್ತ ಆರಂಭವಾಯಿತೊ ಆಗ ತ್ಯಾಜ್ಯಗಳನ್ನು ತಂದು ವೃಷಭಾವತಿ ಕೆರೆಯ ಸುತ್ತ ರಾಶಿ ಹಾಕಲು ಜನ ಆರಂಭಿಸಿದರು. 

ವೃಷಭಾವತಿ ಕೆರೆ 170 ಚದರ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಜಲಾನಯನ ಪ್ರದೇಶ ಹೊಂದಿದ್ದು ನಗರದ 97 ವಾರ್ಡ್ ಗಳ ಮೂಲಕ ಹರಿದುಹೋಗುತ್ತದೆ. ಕೆಂಪಾಂಬುದಿ ಕೆರೆ, ಸ್ಯಾಂಕಿ ಕೆರೆ, ಯಡಿಯೂರು ಕೆರೆಗೆ ಅಂತರ ಸಂಪರ್ಕವನ್ನು ಹೊಂದಿರುತ್ತದೆ. ವೃಷಭಾವತಿ ಕಣಿವೆಯಲ್ಲಿ ಒಂದು ಕಾಲದಲ್ಲಿ ಸುಮಾರು 71 ಕೆರೆಗಳು ಇದ್ದವು. ಇಂದು ಒಳಚರಂಡಿ, ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯ ಮತ್ತು ನಿರ್ಮಾಣ ಚಟುವಟಿಕೆಗಳು, ತ್ಯಾಜ್ಯಗಳನ್ನು ಎಸೆಯುವುದರಿಂದ ಕೆರೆಗಳ ಸಂಖ್ಯೆ 35ಕ್ಕೆ ಇಳಿದಿದೆ. ಇಲ್ಲಿ ಕೆರೆ ನೀರು ಕೆಂಗೇರಿ ಕಡೆ ಹರಿದು ಬಿಡದಿಯ ಬೈರಮಂಗಲದಲ್ಲಿ ಸುವರ್ಣಮುಖಿಯನ್ನು ಸೇರುತ್ತದೆ. 


ಒಂದು ಕಾಲದಲ್ಲಿ ಬೆಂಗಳೂರು ನಗರಿಗರ ಜೀವನಾಡಿಯಾಗಿದ್ದ ವೃಷಭಾವತಿ ನದಿ ನೀರು ಇಂದು ಬತ್ತಿ ಹೋಗುತ್ತಿದ್ದು ಇರುವ ನೀರು ಕಲುಷಿತಗೊಂಡು ಕೊಳಚೆಯಾಗಿದೆ. ರಾಸಾಯನಿಕ ಸೇರ್ಪಡೆಯಾಗಿ ಮಂಜುಗಡ್ಡೆಯಂತಾಗಿದೆ. ಚೌಕಹಳ್ಳಿಯ ನಿವಾಸಿಗಳು ಜಾನುವಾರುಗಳನ್ನು ನೀರು ಕುಡಿಯಲು ಬಿಡುತ್ತಾರೆ. ಬಟ್ಟೆ ತೊಳೆಯುತ್ತಾರೆ, ಇತರ ಚಟುವಟಿಕೆಗಳಿಗೆ ಬಳಸುತ್ತಾರೆ, ಇದರಿಂದಾಗಿ ಚರ್ಮದ ಕಾಯಿಲೆಯಿಂದ ಇಲ್ಲಿನ ಅನೇಕ ನಿವಾಸಿಗಳು ಬಳಲುತ್ತಿದ್ದಾರೆ. ಸುತ್ತಮುತ್ತಲ ರೈತರು ಬೆಳೆಗಳನ್ನು ಬೆಳೆಯಲು ಬಳಸುತ್ತಾರೆ.


ಇಲ್ಲಿನ ಜಾನುವಾರುಗಳ ಹಾಲು ಮತ್ತು ತರಕಾರಿಗಳು ವಿಷಪೂರಿತವಾಗಿ ಬೆಂಗಳೂರಿಗರಿಗೆ ಪೂರೈಕೆಯಾಗುತ್ತಿದೆ. 

SCROLL FOR NEXT