ರಾಜ್ಯ

ಡಿಎನ್ಎ ಮಾದರಿ ಮೂಲಕ ನರಹಂತಕ ಹುಲಿ ಸೆರೆಗೆ ಬಲೆ ಬೀಸಿದ ಇಲಾಖೆ

Manjula VN

ಬೆಂಗಳೂರು: ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣವಾಗಿರುವ ನರಹಂತಕ ಹುಲಿಯನ್ನು ಡಿಎನ್ಎ ಮಾದರಿ ಮೂಲಕ ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. 

ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಚೌಡಹಳ್ಳಿಯ ಇಬ್ಬರು ರೈತರನ್ನು ಹುಲಿಯೊಂದು ಬಲಿ ತೆಗೆದುಕೊಂಡಿತ್ತು. ಈ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬುಧವಾರದಿಂದ ಕಾರ್ಯಾಚರಣೆ ಆರಂಭಿಸಿದೆ. 

ಸಾಕಾನೆಗಳನ್ನು ಬಳಸಿಕೊಂಡು ಹುಲಿಯನ್ನು ಹಿಡಿಯಲು ಇಲಾಖೆ ಮುಂದಾಗಿದ್ದು, ಕಾರ್ಯಾಚರಣೆ ವೇಳೆ ಹುಲಿ ಪ್ರತಿದಾಳಿ ನಡೆಸಿದರೆ, ಗುಂಡು ಹೊಡೆಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 

ಸೆ.1ರಂದು ಚೌಡಹಳ್ಳಿ ಶಿವಮಾದಯ್ಯನ ಮೇಲೂ ದಾಳಿ ನಡೆಸಿ ಸಾಯಿಸಿದ್ದ ಹುಲಿ. 8 ರಂದು ಬಂಡೀಪುರ ಹುಲಿ ಯೋಜನೆಯ ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ಚೌಡಹಳ್ಳಿಯ ಶಿವಲಿಂಗಪ್ಪ ಎಂಬ ರೈತನ ಮೇಲೆರಗಿ ಸಾಯಿಸಿತ್ತು. ಹುಲಿ ರೈತರನ್ನು ಬಲಿ ತೆಗೆದುಕೊಂಡ ಅನತಿ ದೂರದಲ್ಲಿ ಎರಡು ತಾತ್ಕಾಲಿಕ ಟೆಂಟ್ ಹಾಕಲಾಗಿದ್ದು, ಅಲ್ಲಿ ಬಂಡೀಪುರ ಸಾಕಾನೆ ರೋಹಿತ್, ಪಾರ್ಥ, ಗಣೇಶ ಬೀಡುಬಿಟ್ಟಿವೆ. ಮೂರು ಆನೆಗಳೊಂದಿಗೆ ದಸರಾದಲ್ಲಿ ಭಾಗವಸಿದ್ದ ಅಭಿಮನ್ಯು, ಗೋಪಾಲಸ್ವಾಮಿ, ಕೃಷ್ಣ ಸಾಕಾನೆಗಳ ಜೊತೆಗೆ ಬಿಳಿರಂಗನ ಬೆಟ್ಟದ ಗಜೇಂದ್ರ ಕೂಡ ಬುಧವಾರ ರಾತ್ರಿಯೊಳಗೆ ಟೆಂಟ್ ಸೇರಲಿವೆ. ವೈದ್ಯರು ಹಾಗೂ ಶಾರ್ಪ್ ಶೂಟರ್ ಗಳ 4 ಮಂದಿ ತಂಡ ಈಗಾಗಲೇ ಸ್ಥಳಕ್ಕೆ ತೆರಳಿವೆ. 

 ಹುಲಿಗಳು ಕಂಡು ಬಂದರೂ ನರಹಂತಕ ಹುಲಿ ಯಾವುದು ಎಂಬುದನ್ನು ಕಂಡು ಹಿಡಿಯಲು ಕನಿಷ್ಠ 3 ವಾರಗಳು ಬೇಕಾಗುತ್ತದೆ. ಹೀಗಾಗಿ ನರಹಂತಕ ಹುಲಿ ಗುರ್ತಿಸಲು ಅಧಿಕಾರಿಗಳು ಡಿಎನ್ಎ ಮೊರೆ ಹೋಗಲು ನಿರ್ಧರಿಸಿದ್ದಾರೆ. 

ಬಂಡೀಪುರದ ಬಳಿಯಿರುವ ಗ್ರಾಮಗಳ ಬಳಿ 3-4 ಹುಲಿಗಳು ಪತ್ತೆಯಾಗಿದ್ದು, ನರಹಂತಕ ಹುಲಿ ಪತ್ತೆಗಾಗಿ ಕಾರ್ಯಗಳು ಮುಂದುವರೆದಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ವ್ಯಕ್ತಿ ಸಾವಿಗೆ ಕಾರಣವಾದ ಹುಲಿಯ ಡಿಎನ್ಎ ಮಾದರಿ ದೊರಕಿಲ್ಲ. ಆದರೆ, ವ್ಯಕ್ತಿಯ ದೇಹದ ಮೇಲೆ ಕೂದಲೊಂದು ಪತ್ತೆಯಾಗಿದ್ದು, ಇದರಿಂದ ಯಾವ ಪ್ರಾಣಿ ದಾಳಿ ನಡೆಸಿರಬಹುದು ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ. ವರದಿ ಬರಲು ಇನ್ನೂ 3-4 ವಾರಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಪಶುವೈದ್ಯ ತಜ್ಞರು ಮಾಹಿತಿ ನೀಡಿದ್ದಾರೆ. 

SCROLL FOR NEXT