ರಾಜ್ಯ

ಅಕ್ರಮ ದೇಗುಲ ನಿರ್ಮಾಣ: ಬಿಬಿಎಂಪಿ ಆಯುಕ್ತರ ವಿರುದ್ಧ 'ಹೈ' ತೀವ್ರ ಕಿಡಿ

Manjula VN

ಬೆಂಗಳೂರು: ನಗರದ ಮಲ್ಲೇಶ್ವರದ 16ನೇ ಅಡ್ಡ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಶ್ರೀ ವೆಂಕಟೇಶ್ವರ ದೇವಾಲಯ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಅಸಮರ್ಪಕ ಆಕ್ಷೇಪಣೆ ಸಲ್ಲಿಸಿದ್ದ ಬಿಬಿಎಂಪಿ ಆಯುಕ್ತರ ವಿರುದ್ಧ ಹೈಕೋರ್ಟ್ ಬುಧವಾರ ತೀವ್ರವಾಗಿ ಕಿಡಿಕಾರಿದೆ. 

ಆಯುಕ್ತರ ಪ್ರಕರಣ ಸಂಬಂಧ ಸಲ್ಲಿಸಿದ ತಮ್ಮ ಆಕ್ಷೇಪಣೆಯಲ್ಲಿ ಸಾರ್ವಜನಿಕ ಸ್ಥಳ ಅತಿಕ್ರಮಿಸಿ ದೇವಾಲಯ ನಿರ್ಮಿಸಲಾಗಿದೆ. ಇದು ಅಕ್ರಮ ಎಂದು ಒಂದೆಡೆ ಹೇಳುತ್ತಾರೆ. ಮತ್ತೊಂದೆಡೆ ದೇವಾಲಯದ ವಿರುದ್ಧ ಕ್ರಮ ಜರುಗಿಸಲು ಸ್ಥಳದ ಸರ್ವೆ ಮಾಡಬೇಕು ಹಾಗೂ ದಾಖಲೆ ಪರಿಶೀಲಿಸಬೇಕು ಎಂದು ಹೇಳಿದ್ದಾರೆ. ಇಂತಹ ತದ್ವಿರುದ್ಧ ಹೇಳಿಕೆಯ ಅರ್ಥವೇನು? ಪಾಲಿಕೆ ತನ್ನ ಆಸ್ತಿಯನ್ನು ರಕ್ಷಿಸಲು ಕೆಎಂಸಿ ಕಾಯ್ದೆಯ ಸೆಕ್ಷನ್ 321ರಡಿ ನೇರ ಕ್ರಮ ಜರುಗಿಸಬಹುದು ಎಂಬ ಕನಿಷ್ಟ ಜ್ಞಾನವೂ ಆಯುಕ್ತರಿಗೆ ಇಲ್ಲವೇ ಎಂದು ಪ್ರಶ್ನಿಸಿತು. 

ಸಾರ್ವಜನಿಕ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿ ವೆಂಕಟೇಶ್ವರ ದೇವಾಲಯವನ್ನು ನಿರ್ಮಿಸಸಲಾಗಿದೆ ಎಂದು ಆರೋಪಿಸಿ ಮಲ್ಲೇಶ್ವರದ ನಿವಾಸಿ ಹೆಚ್.ಎನ್.ಎ ಪ್ರಸಾದ್ ಹೈಕೋರ್ಟ್'ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 

ಈ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠಕ್ಕೆ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಆಕ್ಷೇಪಣೆ ಸಲ್ಲಿಸಿದ್ದರು. ಈ ಆಕ್ಷೇಪಣೆಯಲ್ಲಿ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿರುವುದನ್ನು ನ್ಯಾಯಪೀಠ ಗಮನಿಸಿತು. ಅದನ್ನು ತೀವ್ರವಾಗಿ ಆಕ್ಷೇಪಿಸಿದ ಪೀಠ, ಈ ರೀತಿಯ ವ್ಯತಿರಿಕ್ತ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ. ಬಿಬಿಎಂಪಿ ಆಯುಕ್ತರಂತಹ ಜವಾಬ್ದಾರಿಯುತ ಹುದ್ದೆಯಲ್ಲಿ ಇಂತಹ ಅಧಿಕಾರಿಗಳು ಇದ್ದರೆ ಹೇಗೆ? 

ಸರ್ಕಾರವು ಅವರನ್ನು ವರ್ಗಾವಣೆ ಮಾಡಬೇಕಾಗುತ್ತದೆ. ಅಕ್ರಮ ದೇವಾಲಯದ ವಿರುದ್ಧ ಕ್ರಮ ಜರುಗಿಸಲು ಸರ್ವೇ ನಡೆಸಬೇಕೆಂದು ಆಯುಕ್ತರು ಹೇಳುತ್ತಾರೆ. ಒಂದೊಮ್ಮೆ ಯಾರಾದರೂ ವಿಧಾನಸೌಧದ ಮುಂಭಾಗದಲ್ಲಿ ಪಾದಚಾರಿ ಮಾರ್ಗ ಒತ್ತವವರಿ ಮಾಡಿದರೆ, ಒತ್ತುವರಿದಾರರರ ವಿರುದ್ಧ ಪಾಲಿಕೆ ಆಯುಕ್ತರು ಕೂಡಲೇ ಕ್ರಮಕೈಗೊಳ್ಳುತ್ತಾರೋ ಅಥವಾ ಈ ಪ್ರಕರಣದಲ್ಲಿ ಹೇಳಿರುವಂತೆ ಸರ್ವೇ ಮಾಡಬೇಕು, ದಾಖಲೆ ಪರಿಶೀಲಿಸಬೇಕು ಎನ್ನುತ್ತಾರೋ ಎಂದು ಕಟುವಾಗಿ ಪ್ರಶ್ನಿಸಿದೆ. 

ಆಯುಕ್ತರು ಒಂದು ವಾರದಲ್ಲಿ ಆಕ್ಷೇಪಣೆಯಲ್ಲಿನ ತಪ್ಪುಗಳನ್ನು ಸರಿಪಡಿಸಿ, ಸಮರ್ಪಕ ಆಕ್ಷೇಪಣೆ ಸಲ್ಲಿಸಬೇಕು. ತಪ್ಪಿದರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಅ.17ಕ್ಕೆ ಮುಂದೂಡಿತು. 

SCROLL FOR NEXT